ADVERTISEMENT

100 ಮೀ. ಓಟ: ಪ್ರಣವ್‌ಗೆ ಅನಿರೀಕ್ಷಿತ ಚಿನ್ನ

ಫೆಡರೇಷನ್‌ ಕಪ್‌: ಕೂಟ ದಾಖಲೆ ಸ್ಥಾಪಿಸಿದ ಸಾವನ್

ಪಿಟಿಐ
Published 21 ಏಪ್ರಿಲ್ 2025, 16:07 IST
Last Updated 21 ಏಪ್ರಿಲ್ 2025, 16:07 IST
<div class="paragraphs"><p>ಓಟ</p></div>

ಓಟ

   

ಕೊಚ್ಚಿ: ಖ್ಯಾತನಾಮ ಓಟಗಾರರನ್ನು ಹಿಂದೆಹಾಕಿದ ರೈಲ್ವೇಸ್‌ನ ಪ್ರಣವ್ ಪ್ರಮೋದ್, ಸೋಮವಾರ ಆರಂಭವಾದ ರಾಷ್ಟ್ರೀಯ ಫೆಡರೇಷನ್ ಕಪ್ ಸೀನಿಯರ್ ಅಥ್ಲೆಟಿಕ್‌ ಕೂಟದ ಪುರುಷರ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಬೆಳ್ಳಿ ಗೆದ್ದಿದ್ದ 23 ವರ್ಷ ವಯಸ್ಸಿನ ಪ್ರಣವ್‌ 10.27 ಸೆ.ಗಳಲ್ಲಿ ಗುರಿತಲುಪಿ ನಾಲ್ಕು ದಿನಗಳ ಕೂಟದ ಮೊದಲ ದಿನ ಗಮನ ಸೆಳೆದರು. ರಾಷ್ಟ್ರೀಯ ಕ್ರೀಡೆಗಳಲ್ಲಿ ಅವರು 10.32 ಸೆ. ತೆಗೆದುಕೊಂಡಿದ್ದರು. ಆದರೆ ಏಷ್ಯನ್ ಚಾಂಪಿಯನ್‌ಷಿಪ್‌ಗೆ ನಿಗದಿಪಡಿಸಿದ ಅರ್ಹತಾ ಗಡುವಿನೊಳಗೆ (10.25 ಸೆ.) ಗುರಿ ತಲುಪಲಾಗಲಿಲ್ಲ.

ADVERTISEMENT

ಒಡಿಶಾದ ಅನಿಮೇಶ್ ಕುಜೂರ್ ಮತ್ತು ಕರ್ನಾಟಕದ ಮಣಿಕಂಠ ಹೋಬಳಿದಾರ್ ಕ್ರಮವಾಗಿ 10.32 ಸೆ. ಮತ್ತು 10.35 ಸೆ. ತೆಗೆದುಕೊಂಡು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು. ರಾಷ್ಟ್ರೀಯ ದಾಖಲೆ (10.20 ಸೆ.) ಹೊಂದಿರುವ ರಿಲಯನ್ಸ್‌ನ ಗುರಿಂದರ್‌ವೀರ್ ಸಿಂಗ್ ಹಿನ್ನಡೆ ಕಂಡು 11.21 ಸೆ.ಗಳೊಡನೆ ಎಂಟನೇ (ಕೊನೆಯ) ಸ್ಥಾನ ಪಡೆದರು.

ಕೆಲವು ವರ್ಷಗಳಿಂದ ಸಿಂಗ್, ಕುಜೂರ್‌, ಹೋಬಳಿದಾರ್ ಮತ್ತು ಆಮ್ಲನ್ ಬೊರ್ಗೊಹೈನ್ ಈ ಓಟದಲ್ಲಿ ಮೇಲುಗೈ ಸಾಧಿಸುತ್ತಿದ್ದರು. ಈ ಏಕಸ್ವಾಮ್ಯವನ್ನು ಪ್ರಣವ್ ಮುರಿದರು.

ಸಚಿನ್‌ಗೆ ಚಿನ್ನ

ಜಾವೆಲಿನ್‌ ಥ್ರೊದಲ್ಲಿ ಪೊಲೀಸ್‌ ಕ್ರೀಡಾ ನಿಯಂತ್ರಣ ಮಂಡಳಿಯ ಸಚಿನ್ ಯಾದವ್ 83.86 ಮೀ. ಸಾಧನೆಯೊಡನೆ ನಿರೀಕ್ಷೆಯಂತೆ ಚಿನ್ನ ಗೆದ್ದರು. 25 ವರ್ಷ ವಯಸ್ಸಿನ ಸಚಿನ್ ಐದನೇ ಯತ್ನದಲ್ಲಿ ಈ ದೂರ ಸಾಧಿಸಿದರು. ನೀರಜ್‌ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಕೂಟದಲ್ಲಿ ಭಾಗವಹಿಸುವ ನೆಚ್ಚಿನ ಸ್ಪರ್ಧಿ ಅವರಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಏಳು ಮಂದಿ ಏಷ್ಯನ್ ಕೂಟಕ್ಕೆ ನಿಗದಿಪಡಿಸಿದ ಅರ್ಹತಾ ಮಟ್ಟ (75.36 ಮೀ)  ಮೀರಿದರು. ರೈಲ್ವೇಸ್‌ನ ಯಶ್ವೀರ್ ಸಿಂಗ್ (80.85 ಮೀ.), ರಿಲಯನ್ಸ್‌ನ ಸಾಹಿಲ್ ಸಿಲ್ವಾಲ್ (77.84 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಏಷ್ಯನ್ ಗೇಮ್ಸ್‌ ಬೆಳ್ಳಿ ವಿಜೇತ ಕಿಶೋರ್ ಜೇನಾ (77.82 ಮೀ) ಮತ್ತೆ ಹಿನ್ನಡೆ ಕಂಡು ನಾಲ್ಕನೇ ಸ್ಥಾನಕ್ಕೆ ಸರಿದರು. ಮಹಾರಾಷ್ಟ್ರದ ಶಿವಂ ಲೋಹಕರೆ (76.75 ಮೀ.), ಕರ್ನಾಟಕದ ಶಶಾಂಕ್ ಪಾಟೀಲ (76.66 ಮೀ.) ಮತ್ತು ಉತ್ತರ ಪ್ರದೇಶದ ರೋಹಿತ್ ಯಾದವ್‌ (76.37) ಐದರಿಂದ ಏಳರವರೆಗಿನ ಸ್ಥಾನ ಪಡೆದರು.

ಸಾವನ್ ಬರ್ವಾನ್ ದಾಖಲೆ:

ಸೇನೆಯ ಸಾವನ್ ಬರ್ವಾಲ್ ನಿರೀಕ್ಷೆಯಂತೆ ಬೆಳಿಗ್ಗೆ ನಡೆದ ಪುರುಷರ 10,000 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದರು. ಈ ದೂರವನ್ನು 28ನಿ.57.13 ಸೆ.ಗಳಲ್ಲಿ ಪೂರೈಸಿದ ಸಾವನ್‌, ಕೂಟ ದಾಖಲೆ ಸ್ಥಾಪಿಸಿದರು. ಜೊತೆಗೆ ಏಷ್ಯನ್ ಚಾಂಪಿಯನ್‌ಷಿಪ್‌ಗೆ ನಿಗದಿ ಪಡಿಸಿದ ಅರ್ಹತಾ ಮಾನದಂಡವನ್ನೂ (29:33.26) ಪೂರೈಸಿದರು. ಈ ಹಿಂದಿನ ಕೂಟ ದಾಖಲೆಯನ್ನು (28:57.90) ಸುರೇಂದ್ರ ಸಿಂಗ್‌ 2007ರಲ್ಲಿ ಕೋಲ್ಕತ್ತದಲ್ಲಿ ಸ್ಥಾಪಿಸಿದ್ದರು.

ರೈಲ್ವೆಯ ಅಭಿಷೇಕ್ ಪಾಲ್ (29:14.86) ಕೂಡ ಅರ್ಹತಾ ಮಾನದಂಡ ಪೂರೈಸಿದರು. ಸೇನೆಯ ಕಿರಣ್ ಮಾತ್ರೆ (29:47.62) ಕಂಚಿನ ಪದಕ ಪಡೆದರು.

ಮಹಿಳೆಯರ 10,000 ಮೀ. ಓಟದ ಚಿನ್ನ ಅಂತರರಾಷ್ಟ್ರೀಯ ಓಟಗಾರ್ತಿ ಮಹಾರಾಷ್ಟ್ರದ ಸಂಜೀವನಿ ಜಾಧವ್ (33:44.33 ಸೆ.) ಪಾಲಾಯಿತು.

ಸ್ನೇಹಾಗೆ ಬೆಳ್ಳಿ: ತೆಲಂಗಾಣದ ನಿತ್ಯಾ ಗಂಧೆ (11.50 ಸೆ.) ಮಹಿಳೆಯರ 100 ಮೀ. ಓಟದಲ್ಲಿ 11.50 ಸೆ.ಗಳಲ್ಲಿ ಗುರಿತಲುಪಿ ಕೂಟದ ವೇಗದ ರಾಣಿ ಎನಿಸಿದರು. ತಮಿಳುನಾಡಿನ ಅಭಿನಯಾ ರಾಜರಾನಜ್ (11.54 ಸೆ.) ಬೆಳ್ಳಿ ಮತ್ತು ಕರ್ನಾಟಕದ ಸ್ನೇಹಾ ರಮೇಶ್ (11.62 ಸೆ.) ಕಂಚು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.