ಬಿ.ಸಿ.ರಮೇಶ್
ದಾವಣಗೆರೆ: ಕನ್ನಡಿಗ, ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ.ರಮೇಶ್ ಅವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡುವ ಬೆಂಗಳೂರು ಬುಲ್ಸ್ ತಂಡದ ಮುಖ್ಯ ಕೋಚ್ ಆಗಿ ಬುಧವಾರ ನೇಮಕಗೊಂಡಿದ್ದಾರೆ.
2018ರಲ್ಲಿ (6ನೇ ಆವೃತ್ತಿ) ಬುಲ್ಸ್, ಚೊಚ್ಚಲ ಟ್ರೋಫಿ ಗೆದ್ದಿದ್ದಾಗ ರಮೇಶ್ ಕೂಡ ಕೋಚ್ ಆಗಿದ್ದರು. ಏಳನೇ ಆವೃತ್ತಿಯಲ್ಲಿ (2019) ಬೆಂಗಾಲ್ ವಾರಿಯರ್ಸ್ ಹಾಗೂ 10ನೇ ಆವೃತ್ತಿಯಲ್ಲಿ (2023) ಪುಣೇರಿ ಪಲ್ಟನ್‌ನ ಮುಖ್ಯ ಕೋಚ್ ಆಗಿದ್ದ ಇವರು ಈ ತಂಡಗಳ ಪ್ರಶಸ್ತಿಯ ಕನಸು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಬುಲ್ಸ್ ಬಳಗವನ್ನು ಚಾಂಪಿಯನ್ ಆಗಲು ಪಳಗಿಸುವ ಹೊಣೆ ಹೊತ್ತಿರುವ ಇವರು ‘ಪ್ರಜಾವಾಣಿ’ ಜೊತೆ ಬುಧವಾರ ಮಾತನಾಡಿದರು.
l→ ಯಾವ ತಂಡದಿಂದ ಹೊರಕಳಿಸಿದ್ದರೊ ಅದೇ ತಂಡಕ್ಕೆ ಮುಖ್ಯ ಕೋಚ್ ಆಗಿದ್ದೀರಿ? ಹೇಗನಿಸುತ್ತಿದೆ?
ಬುಲ್ಸ್ ಮೊದಲ ಬಾರಿ ಪ್ರಶಸ್ತಿ ಗೆದ್ದಾಗ ನಾನೂ ಮುಖ್ಯ ಕೋಚ್ ಆಗಿದ್ದೆ. ಆದರೆ ಯಶಸ್ಸಿನ ಸಂಪೂರ್ಣ ಶ್ರೇಯ ರಣಧೀರ್ ಸಿಂಗ್ ಅವರಿಗೆ ಸಂದಿತ್ತು. ಬಳಿಕ ಫ್ರಾಂಚೈಸ್‌ನವರು ಏಕಾಏಕಿ ನನ್ನನ್ನು ಕೈಬಿಟ್ಟಿದ್ದರು. ಆಗ ನನ್ನ ವಿರುದ್ಧ ಪಿತೂರಿ ನಡೆದಿತ್ತು. ನನ್ನ ಸಾಮರ್ಥ್ಯ ಏನೆಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ನನ್ನ ಕಾರ್ಯವೈಖರಿ ಹಾಗೂ ಬದ್ಧತೆ ನೋಡಿ ಬುಲ್ಸ್ ಫ್ರಾಂಚೈಸಿ ಈ ಜವಾಬ್ದಾರಿ ವಹಿಸಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇದೆ.
l→ ಹಿಂದಿನ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ತೋರಿದ್ದ ತಂಡವನ್ನು ಸಜ್ಜುಗೊಳಿಸುವ ಹೊಣೆ ಹೆಗಲೇರಿದೆ. ಈ ಕೆಲಸ ಸವಾಲಿನದ್ದಲ್ಲವೇ?
ಬುಲ್ಸ್, ಕಳೆದ ಆವೃತ್ತಿಯಲ್ಲಿ ಆಡಿದ್ದ 22 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಈ ತಂಡವನ್ನು ಬಲಿಷ್ಠಗೊಳಿಸುವ ಕೆಲಸ ಸವಾಲಿನದ್ದೇ. ಹಾಗಂತ ಎದೆಗುಂದುವುದಿಲ್ಲ. ಮುಂದಿನ ಆವೃತ್ತಿಯಲ್ಲಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ 6ರೊಳಗೆ ಸ್ಥಾನ ಗಿಟ್ಟಿಸುವಂತೆ ಮಾಡುವ ಗುರಿ ಇದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಂಡು ಸಾಗುತ್ತೇವೆ.
l→ ಕಳೆದ ಆವೃತ್ತಿಯಲ್ಲಿ ಬುಲ್ಸ್ ಎಡವಿದ್ದೆಲ್ಲಿ?
ಆಟಗಾರರ ಆಯ್ಕೆಯಲ್ಲೇ ತಂಡ ಎಡವಿತ್ತು. ತಾರಾ ವರ್ಚಸ್ಸಿನ ಒಂದಿಬ್ಬರನ್ನು ತಂಡಕ್ಕೆ ಸೇರಿಸಿಕೊಂಡು ಪ್ರಶಸ್ತಿ ಗೆಲ್ಲುತ್ತೇವೆ ಎಂದು ಬೀಗುವುದು ದಡ್ಡತನವಲ್ಲವೆ?
l→ ಮುಂದಿನ ಆವೃತ್ತಿಗಾಗಿ ತಂಡದ ಆಯ್ಕೆ ಹೇಗಿರಲಿದೆ?
ಸ್ವ–ಹಿತಾಸಕ್ತಿ ಬದಿಗೊತ್ತಿ ತಂಡದ ಯಶಸ್ಸಿಗಾಗಿ ಹೋರಾಡುವ ಆಟಗಾರರು ನಮಗೆ ಬೇಕು. ಅಂತಹವರ ಹುಡುಕಾಟ ಶುರುವಾಗಿದೆ. ಗೆಲುವಿನ ತುಡಿತ ಇರುವ ವರನ್ನು ಗುರುತಿಸಿ ಅವಕಾಶ ನೀಡುತ್ತೇವೆ. ಉತ್ತಮ ಲಯದಲ್ಲಿರುವ ಆಟಗಾರರನ್ನು ಸೆಳೆದು ಪರಿಪೂರ್ಣ ತಂಡ ಕಟ್ಟುತ್ತೇವೆ. ಉತ್ತರ ಭಾರತೀಯರ ಜೊತೆಗೆ ದಕ್ಷಿಣದ ಆಟಗಾರರಿಗೂ ಹೆಚ್ಚಿನ ಅವಕಾಶ ನೀಡುವ ಆಲೋಚನೆ ಇದೆ.
l→ ನವತಾರೆಗಳ ಹುಡುಕಾಟ ಶುರುವಾಗಿದೆಯಾ?
ಹೊಸ ಪ್ರತಿಭೆಗಳ ಅನ್ವೇಷಣೆಗೆಂದೇ ಫ್ರಾಂಚೈಸ್‌ನವರು ಅಕಾಡೆಮಿಯೊಂದನ್ನು ಶುರು ಮಾಡಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿನ ಭರವಸೆಯ ಆಟಗಾರರನ್ನು ಹೆಕ್ಕಿ ಟ್ರಯಲ್ಸ್ ನಡೆಸುತ್ತೇವೆ. ಅದರಲ್ಲಿ ಆಯ್ಕೆಯಾದವರಿಗೆ ತರಬೇತಿ ಕೊಡುತ್ತೇವೆ. ಈ ಕಾರ್ಯ ಮುಂದಿನ ವಾರದಿಂದಲೇ ಆರಂಭವಾಗಲಿದೆ.
l→ಬುಲ್ಸ್ ಬಳಗದಲ್ಲಿ ಕನ್ನಡಿಗರೇ ಇಲ್ಲ ಎಂಬ ಕೊರಗಿದೆ. ನಿಮ್ಮ ಅವಧಿಯಲ್ಲಿ ಸ್ಥಳೀಯರಿಗೆ ಅವಕಾಶ ಸಿಗಬಹುದೇ?
ತಂಡದಲ್ಲಿ ಕನ್ನಡಿಗರೂ ಆಡುವಂತಾಗಬೇಕೆಂಬ ಆಸೆ ನನಗೂ ಇದೆ. ಹಾಗಂತ ಸಿಕ್ಕ ಸಿಕ್ಕವರನ್ನೆಲ್ಲಾ ಸೇರಿಸಿ ಕೊಳ್ಳಲು ಸಾಧ್ಯವಿಲ್ಲ. ಪ್ರತಿಭೆ ಇದ್ದವರಿಗೆ ಖಂಡಿತಾ ಅವಕಾಶ ನೀಡುತ್ತೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.