ADVERTISEMENT

ಅಥ್ಲೆಟಿಕ್ಸ್‌ನಲ್ಲಿ ಭರವಸೆಯ ರವಿ ಕಿರಣ

ಮುಂಡಗೋಡ: 100 ಮೀ. ಓಟದ ಗುರಿಯನ್ನು 11.2 ಸೆಕೆಂಡ್‌ಗಳಲ್ಲಿ ತಲುಪುವ ಓಟಗಾರ

ಶಾಂತೇಶ ಬೆನಕನಕೊಪ್ಪ
Published 9 ಜುಲೈ 2019, 19:30 IST
Last Updated 9 ಜುಲೈ 2019, 19:30 IST
ರವಿಕಿರಣ ಸಿದ್ಧಿ ಅವರ ಓಟದ ಸಾಮರ್ಥ್ಯವನ್ನು ಕಂಡುಹಿಡಿಯಲು ಮೈಮೇಲೆ ಪಟ್ಟಿಗಳನ್ನು ಅಳವಡಿಸಿರುವುದು
ರವಿಕಿರಣ ಸಿದ್ಧಿ ಅವರ ಓಟದ ಸಾಮರ್ಥ್ಯವನ್ನು ಕಂಡುಹಿಡಿಯಲು ಮೈಮೇಲೆ ಪಟ್ಟಿಗಳನ್ನು ಅಳವಡಿಸಿರುವುದು   

ಮುಂಡಗೋಡ: ಗ್ರಾಮೀಣಓಟಗಾರರೊಬ್ಬರುರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ದಾಖಲೆ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ.

ಯಲ್ಲಾಪುರ ತಾಲ್ಲೂಕಿನ ಬಿಳಕಿಯ ರವಿಕಿರಣ ಸಿದ್ಧಿ ಇಂತಹ ಸಾಧನೆ ಮಾಡುತ್ತಿರುವವರು. ಇಲ್ಲಿನ ಲೊಯೋಲ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ಮಾಡಿ, ಸದ್ಯ ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ಬಿ.ಎ ಪದವಿಯ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪಿಯು ಹಂತದಲ್ಲಿ ಇರುವಾಗ ರಾಜ್ಯಮಟ್ಟದ 100 ಮೀ. ಓಟದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. ಇವರ ಓಟವನ್ನು ನೋಡಿದ್ದ ಕೆಲವರು, ಗೆಲ್ಲುವ ಸಾಮರ್ಥ್ಯ ಇದೆ ಎಂದಿದ್ದರು.

ಮಿಂಚಿನ ಓಟದತ್ತ ಗುರಿ ನೆಟ್ಟು, ಈಗಿರುವ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಬೇಕೆಂಬ ಕನಸು ಕಂಡಿದ್ದಾರೆ. ಕಠಿಣ ತರಬೇತಿ ಪಡೆಯುತ್ತ ಸದ್ದಿಲ್ಲದೆ ಹೆಸರು ಮಾಡುತ್ತಿದ್ದಾರೆ. ಸದ್ಯ ರವಿಕಿರಣ ಸಿದ್ಧಿ ಅವರು, 100 ಮೀಟರ್ ಗುರಿಯನ್ನು 11.2 ಸೆಕೆಂಡ್‌ಗಳಲ್ಲಿ ತಲುಪುತ್ತಾರೆ. ರಾಷ್ಟ್ರೀಯ ದಾಖಲೆ 10.4 ಸೆಕೆಂಡ್ ಇದೆ. ತರಬೇತಿ ಪಡೆಯುವುದಕ್ಕೂ ಮುಂಚೆ 12.98 ಸೆಕೆಂಡ್‌ಗಳಲ್ಲಿ ಓಡುತ್ತಿದ್ದರು.

ADVERTISEMENT

‘ಕಳೆದ ತಿಂಗಳು ಮಣಿಪಾಲದಲ್ಲಿ ನಡೆದಿದ್ದ 15 ದಿನಗಳ ತರಬೇತಿ ಕ್ಯಾಂಪ್‌ನಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ನನ್ನ ದೈಹಿಕ ಸಾಮರ್ಥ್ಯ ಪರೀಕ್ಷಿಸಿ, 100 ಮೀಟರ್ ಓಟದ ವಿಭಾಗವನ್ನು ಬದಲಿಸಿದರು. 200 ಮೀಟರ್ ಹಾಗೂ 400 ಮೀಟರ್ ಓಡಲು ತರಬೇತಿ ನೀಡಿದ್ದಾರೆ. 20 ಸೆಕೆಂಡ್‌ಗಳಲ್ಲಿ 200 ಮೀಟರ್ ಓಟವನ್ನು ಬೇರೆ ಕ್ರೀಡಾಪಟುಗಳು ಓಡಿದ ರಾಷ್ಟ್ರೀಯ ದಾಖಲೆ ಇದೆ. ನಾನು ಸದ್ಯ 23 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿದ್ದೇನೆ. ಅದೇ ರೀತಿ 400 ಮೀಟರ್ ದೂರವನ್ನು 55 ಸೆಕೆಂಡ್‌ಗಳಲ್ಲಿ ತಲುಪುತ್ತೇನೆ. ರಾಷ್ಟ್ರೀಯ ದಾಖಲೆ 47 ಸೆಕೆಂಡ್‌ಗಳಲ್ಲಿ ಇದೆ’ ಎಂದು ರವಿಕಿರಣ ಸಿದ್ಧಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರಂಭದಲ್ಲಿ ಕಬಡ್ಡಿ ಆಟದತ್ತ ಹೆಚ್ಚಿನ ಆಸಕ್ತಿ ಇತ್ತು. ಪ್ರೌಢಶಾಲಾ ಹಂತದಲ್ಲಿ ವಿಭಾಗಿಯ ಮಟ್ಟದವರೆಗೂ ಪಾಲ್ಗೊಂಡಿದ್ದೆ. ಆದರೆ, ಸೂಕ್ತ ಪ್ರೋತ್ಸಾಹ ಹಾಗೂ ತರಬೇತಿ ಸಿಗದ ಕಾರಣ ಕಬಡ್ಡಿ ಆಡುವುದನ್ನು ನಿಲ್ಲಿಸಿದೆ. ಕಾಲೇಜು ಹಂತದಿಂದಲೇ ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್‌ನವರು ಗುರುತಿಸಿ, ಎಲ್ಲ ರೀತಿಯ ನೆರವು, ತರಬೇತಿ ನೀಡುತ್ತಿದ್ದಾರೆ. ಮುಂದೆ ರಾಷ್ಟ್ರೀಯ ದಾಖಲೆ ಸರಿಗಟ್ಟಿ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಗಳಿಸಬೇಕೆಂಬ ಆಸೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.