
ನವದೆಹಲಿ: ವಿಶ್ವ ಶೂಟಿಂಗ್ ಮಾಜಿ ಚಾಂಪಿಯನ್ ರುದ್ರಾಂಕ್ಷ್ ಪಾಟೀಲ ಅವರು ಏಷ್ಯಾ ಶೂಟಿಂಗ್ ಚಾಂಪಿಯನ್‌ಷಿಪ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಶುಕ್ರವಾರ ಸ್ವರ್ಣಕ್ಕೆ ಗುರಿಯಿಟ್ಟರು. ಒಲಿಂಪಿಯನ್ ಅರ್ಜುನ್ ಬಬೂತಾ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಕರ್ಣಿ ಸಿಂಗ್ ರೇಂಜ್‌ನಲ್ಲಿ ನಡೆದ ಫೈನಲ್ ಸುತ್ತಿನಲ್ಲಿ ಮಹಾರಾಷ್ಟ್ರದ ರುದ್ರಾಂಕ್ಷ್ 251.9 ಅಂಕ ಸಂಪಾದಿಸಿದರು. 22 ವರ್ಷ ವಯಸ್ಸಿನ ರುದ್ರಾಂಕ್ಷ್ ಅವರಿಗೆ ಏಷ್ಯನ್ ಶೂಟಿಂಗ್‌ನಲ್ಲಿ ದೊರೆತ ಮೊದಲ ವೈಯಕ್ತಿಕ ಚಿನ್ನವಾಗಿದೆ.
ಅರ್ಜುನ್ (250.7) ಎರಡನೇ ಸ್ಥಾನ ಪಡೆದರೆ, ಶೂಟರ್ ವಿಶಾಲ್ ಸಿಂಗ್ (185.5) ಐದನೇ ಸ್ಥಾನ ಗಳಿಸಿದರು. ಈ ಮೂವರು (1884.7 ಅಂಕ) ಟೀಮ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕಜಾಕಸ್ತಾನ (1879.4) ಹಾಗೂ ಜಪಾನ್ (1877.2) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದವು.
ಜೂನಿಯರ್ ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಭಾರತದ ಶೂಟರ್‌ಗಳು ಮೂರೂ ಪದಕಗಳನ್ನು ತಮ್ಮದಾಗಿಸಿಕೊಂಡರು. ಹಿಮಾಂಶು (250 ಅಂಕ) ಚಿನ್ನಕ್ಕೆ ಮುತ್ತಿಟ್ಟರೆ, ಅನೀಶ್ ಡಿ. (247.9) ಹಾಗೂ ಸುರೇಶ್ ಪ್ರಣವ್ (226.8) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು. ಟೀಮ್ ವಿಭಾಗದಲ್ಲಿಯೂ ಈ ಮೂವರು (1887.8 ಅಂಕ) ಚಿನ್ನ ತಮ್ಮದಾಗಿಸಿಕೊಂಡರು. ಕಜಾಕಸ್ತಾನ (1851.3) ರಜತ ಪದಕ ಜಯಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.