ADVERTISEMENT

ಅಂತರರಾಷ್ಟ್ರೀಯ ಹಾಕಿಗೆ ರೂಪಿಂದರ್, ಬೀರೇಂದ್ರ ವಿದಾಯ

ಬೆಂಗಳೂರಿನಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಶಿಬಿರದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಕ್ಷೀಣವಾದದ್ದೇ ಕಾರಣ?

ಪಿಟಿಐ
Published 30 ಸೆಪ್ಟೆಂಬರ್ 2021, 16:43 IST
Last Updated 30 ಸೆಪ್ಟೆಂಬರ್ 2021, 16:43 IST
ರೂಪಿಂದರ್ ಪಾಲ್ ಸಿಂಗ್ (ಎಡ) ಮತ್ತು ಮನದೀಪ್ ಸಿಂಗ್ –ಪಿಟಿಐ ಚಿತ್ರ
ರೂಪಿಂದರ್ ಪಾಲ್ ಸಿಂಗ್ (ಎಡ) ಮತ್ತು ಮನದೀಪ್ ಸಿಂಗ್ –ಪಿಟಿಐ ಚಿತ್ರ   

ನವದೆಹಲಿ: ಡ್ರ್ಯಾಗ್ ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್ ಮತ್ತು ಡಿಫೆಂಡರ್ ಬೀರೇಂದ್ರ ಲಾಕ್ರ ಅವರು ಅಂತರರಾಷ್ಟ್ರೀಯ ಹಾಕಿಗೆ ಗುರುವಾರ ವಿದಾಯ ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರಿಬ್ಬರು ಒಂದೇ ದಿನ, ಕೆಲವೇ ತಾಸುಗಳ ಅವಧಿಯಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಇದು ಕ್ರೀಡಾ ವಲಯದಲ್ಲಿ ಅಚ್ಚರಿ ಮೂಡಿಸಿದೆ.

‘ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನಿವೃತ್ತನಾಗಲು ನಿರ್ಧರಿಸಿದ್ದೇನೆ’ ಎಂದು ರೂಪಿಂದರ್ ಪಾಲ್ ಸಿಂಗ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಬೀರೇಂದ್ರ ಲಾಕ್ರ ಅವರ ನಿವೃತ್ತಿ ವಿಷಯವನ್ನು ಹಾಕಿ ಇಂಡಿಯಾ ಬಹಿರಂಗ ಮಾಡಿದೆ. ಹಾಕಿ ಬೆಳವಣಿಗೆ ಯೋಜನೆಯಲ್ಲಿ ಇವರಿಬ್ಬರ ಹೆಸರು ಕಾಣಿಸಿಕೊಳ್ಳುವುದು ಸಾಧ್ಯವಿಲ್ಲ ಮತ್ತು ಮುಂದಿನ ವಾರ ಬೆಂಗಳೂರಿನಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಶಿಬಿರದಲ್ಲಿ ಅವಕಾಶ ಸಿಗುವುದಿಲ್ಲ ಎಂದು ಖಚಿತವಾದ ಕಾರಣ ಇಬ್ಬರೂ ನಿವೃತ್ತರಾಗಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಭಾರತ ಕಂಡ ಅತ್ಯುತ್ತಮ ಡ್ರ್ಯಾಗ್ ಫ್ಲಿಕ್ಕರ್ ಎಂದೆನಿಸಿಕೊಂಡಿದ್ದ 30 ವರ್ಷದ ರೂಪಿಂದರ್ ಪಾಲ್ ದೇಶಕ್ಕಾಗಿ 223 ಪಂದ್ಯಗಳನ್ನು ಆಡಿದ್ದಾರೆ. ‘ಬಾಬ್‘ ಎಂದೇ ಕರೆಯಲಾಗುವ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಟ್ಟು ನಾಲ್ಕು ಗೋಲು ಗಳಿಸಿದ್ದರು. ಕಂಚಿನ ಪಕದಕ್ಕಾಗಿ ನಡೆದ ಪಂದ್ಯದಲ್ಲಿ ಒಂದು ಪೆನಾಲ್ಟಿ ಸ್ಟ್ರೋಕ್‌ನಲ್ಲೂ ಯಶಸ್ವಿಯಾಗಿದ್ದರು.

ADVERTISEMENT

31 ವರ್ಷದ ಲಾಕ್ರ ಭಾರತ ತಂಡದ ಉಪನಾಯಕ ಕೂಡ ಆಗಿದ್ದರು. 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ತಂಡದಲ್ಲೂ 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದ ತಂಡದಲ್ಲೂ ಅವರು ಇದ್ದರು. ಒಟ್ಟು 201 ಅಂತರರಾಷ್ಟ್ರೀಯ ಪಂದ್ಯಗಳನ್ನು ಆವರು ಆಡಿದ್ದಾರೆ.

2012ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಅಂತರರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ ಒಡಿಶಾ ಆಟಗಾರ ಲಾಕ್ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಆಡಿದ್ದಾರೆ. ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಜನಿಸಿದ ರೂಪಿಂದರ್ ಕಠಿಣ ಪರಿಶ್ರಮದ ಮೂಲಕ ವೃತ್ತಿಜೀವನದಲ್ಲಿ ಸಾಧನೆ ಮಾಡಿದ್ದಾರೆ.

2010ರ ಸುಲ್ತಾನ್ ಅಜ್ಲಾನ್ ಶಾ ಕಪ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ಅವರು ವಿ.ಆರ್.ರಘುನಾಥ್ ಜೊತೆಗೂಡಿ ಡ್ರ್ಯಾಗ್‌ಫ್ಲಿಕ್‌ಗೆ ಹೊಸ ಭಾಷ್ಯ ಬರೆದಿದ್ದರು. ಪೆನಾಲ್ಟಿ ಕಾರ್ನರ್ ಮತ್ತು ‍ಪೆನಾಲ್ಟಿ ಸ್ಟ್ರೋಕ್ ಅವಕಾಶಗಳು ಸಿಕ್ಕಿದಾಗಲೆಲ್ಲ ರೂಪಿಂದರ್ ಅವರು ತಂಡದ ಭರವಸೆಯಾಗುತ್ತಿದ್ದರು. ಗಟ್ಟಿಮುಟ್ಟಾದ ದೇಹ ಹೊಂದಿರುವ ಅವರು ಯಾವುದೇ ತಂಡಕ್ಕೆ ಸಿಂಹಸ್ವಪ್ನವಾಗಿದ್ದರು.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ತಂಡದಲ್ಲಿ ಆಡಿದ್ದ ರೂಪಿಂದರ್ ಅವರನ್ನು 2014ರ ವಿಶ್ವಕಪ್‌ನಲ್ಲಿ ಆಡಿದ ತಂಡದ ಉಪನಾಯಕನನ್ನಾಗಿ ಮಾಡಲಾಗಿತ್ತು. 2014 ಮತ್ತು 2018ರ ಏಷ್ಯನ್‌ ಗೇಮ್ಸ್‌ನಲ್ಲೂ ಆಡಿದ್ದಾರೆ. 2017ರಲ್ಲಿ ಗಾಯದ ಸಮಸ್ಯೆ ಅವರನ್ನು ಕಾಡಿತ್ತು.

ಈಚಿನ ಕೆಲವು ತಿಂಗಳುಗಳು ನನ್ನ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದ್ದವು. ಸಹ ಆಟಗಾರರ ಜೊತೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಕೊರಳಿಗೆ ಹಾಕಿಕೊಂಡ ಗಳಿಗೆಯನ್ನು ಎಂದಿಗೂ ಮರೆಯಲಾರೆ. 13 ವರ್ಷ ದೇಶವನ್ನು ಪ್ರತಿನಿಧಿಸಿದ್ದೇನೆ. ಈಗ ಹೊಸ ಪೀಳಿಗೆಗೆ ಅವಕಾಶ ಮಾಡಿಕೊಡಬೇಕಾದ ಜವಾಬ್ದಾರಿ ನನ್ನ ಮೇಲಿದೆ.

ರೂಪಿಂದರ್ ಪಾಲ್ ಸಿಂಗ್ ನಿವೃತ್ತ ಆಟಗಾರ

ಡಿಫೆನ್ಸ್ ವಿಭಾಗದ ಬಲಿಷ್ಠ ಆಟಗಾರ ಮತ್ತು ಭಾರತ ಹಾಕಿ ತಂಡದ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದ ಒಡಿಶಾದ ಬೀರೇಂದ್ರ ಲಾಕ್ರ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಲಿ.

ಹಾಕಿ ಇಂಡಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.