ADVERTISEMENT

ಕೃಷಿ ಹೊಂಡದಲ್ಲೇ ಈಜು ಕಲಿಕೆ!

ಲಾಕ್‌ಡೌನ್‌ನಿಂದಾಗಿ ಪುತ್ತೂರಿನಲ್ಲಿ ಸಿಲುಕಿಕೊಂಡಿರುವ ಎಸ್‌.ಪಿ.ಲಿಖಿತ್‌

ಜಿ.ಶಿವಕುಮಾರ
Published 19 ಏಪ್ರಿಲ್ 2020, 7:00 IST
Last Updated 19 ಏಪ್ರಿಲ್ 2020, 7:00 IST
ಕೃಷಿ ಹೊಂಡದಲ್ಲಿ ಈಜುಪಟುಗಳು 
ಕೃಷಿ ಹೊಂಡದಲ್ಲಿ ಈಜುಪಟುಗಳು    

ಬೆಂಗಳೂರು: ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಜಾರಿಗೊಳಿಸಿವೆ. ಇದರಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಅನೇಕ ಈಜುಪಟುಗಳು ಅಭ್ಯಾಸವಿಲ್ಲದೇ ಪರಿತಪಿಸುವಂತಾಗಿದೆ.

ಲಾಕ್‌ಡೌನ್‌ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಿಲುಕಿಕೊಂಡಿರುವ ಬೆಂಗಳೂರಿನ ಈಜುಪಟು ಎಸ್‌.ಪಿ.ಲಿಖಿತ್‌ಗೆ ಇದರಿಂದ ಯಾವ ತೊಂದರೆಯೂ ಆಗಿಲ್ಲ. ದಟ್ಟ ಕಾನನದ ನಡುವೆ ಇರುವ ಕೃಷಿ ಹೊಂಡವೇ ಅವರ ಪಾಲಿಗೆ ಈಜುಕೊಳವಾಗಿದೆ. ಅದರಲ್ಲೇ ನಿತ್ಯವೂ ತಾಲೀಮು ನಡೆಸುತ್ತಿದ್ದಾರೆ!

ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ (ಎನ್‌ಎಸಿ) ತರಬೇತಿ ಪಡೆಯುತ್ತಿರುವ ಲಿಖಿತ್‌, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಕನಸು ಕಾಣುತ್ತಿದ್ದಾರೆ. ಪುತ್ತೂರಿನಲ್ಲಿ ‘ಲಾಕ್‌’ ಆಗಿದ್ದರ ಕುರಿತು ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ADVERTISEMENT

‘ಎನ್‌ಎಸಿಯಲ್ಲಿ ನಮಗೆ ತರಬೇತಿ ನೀಡುವ ಪಾರ್ಥ ವಾರಣಾಸಿ ಅವರ ಸ್ವಂತ ಊರು ಅದ್ಯನಡ್ಕ. ಇಲ್ಲಿರುವ 60 ಎಕರೆ ಜಮೀನಿನಲ್ಲಿ ಪಾರ್ಥ ಸರ್‌ ಸಾವಯವ ಕೃಷಿ ಮಾಡುತ್ತಾರೆ. ಜೊತೆಗೆ ಬೇಸಿಗೆ ಶಿಬಿರ ಹಾಗೂ ವಿಚಾರ ಸಂಕಿರಣಗಳನ್ನೂ ಆಯೋಜಿಸುತ್ತಾರೆ. ಇದರಲ್ಲಿ ಭಾಗಿಯಾಗಲು ದೇಶ, ವಿದೇಶಗಳಿಂದಲೂ ಹಲವರು ಬರುತ್ತಾರೆ. ಫೆಬ್ರುವರಿ ಅಂತ್ಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಗಾರದಲ್ಲಿ ಪಾಲ್ಗೊಳ್ಳುವ ಸಲುವಾಗಿಎನ್‌ಎಸಿಯಿಂದ ಒಟ್ಟು 15 ಮಂದಿ ಈಜುಪಟುಗಳು ಇಲ್ಲಿಗೆ ಬಂದಿದ್ದೆವು. ಒಂದು ವಾರ ಪುತ್ತೂರಿನಲ್ಲೇ ಅಭ್ಯಾಸವನ್ನೂ ನಡೆಸಿದ್ದೆವು. ಬೆಂಗಳೂರಿಗೆ ವಾಪಸಾಗಬೇಕು ಅಂದುಕೊಂಡಿರುವಾಗಲೇ ಲಾಕ್‌ಡೌನ್‌ ಜಾರಿಯಾಯಿತು. ಹೀಗಾಗಿ ಇಲ್ಲೇ ಸಿಲುಕಿಕೊಂಡೆವು’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಇದ್ದಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯಬೇಕಾಗುತ್ತಿತ್ತು. ಇಲ್ಲಿ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಇದ್ದೇವೆ. ಇಲ್ಲಿನ 20 ಮೀಟರ್‌ ಕೃಷಿ ಹೊಂಡದಲ್ಲೇ ನಿತ್ಯವೂ ಈಜು ಅಭ್ಯಾಸ ಮಾಡುತ್ತಿದ್ದೇವೆ. ಸ್ಕೇಟ್‌ ಬೋರ್ಡಿಂಗ್‌, ಡೈವಿಂಗ್‌, ಹಗ್ಗದ ಮೇಲೆ ನಡೆಯುವುದು ಹೀಗೆ ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇವೆ. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಇಲ್ಲಿ ಹಾವು, ಚೇಳು, ಹಂದಿಗಳೆಲ್ಲಾ ಓಡಾಡುತ್ತಿರುತ್ತವೆ. ಹೀಗಾಗಿ ತುಂಬಾ ಎಚ್ಚರದಿಂದ ಇರಬೇಕು. ಪಾರ್ಥ ಸರ್‌, ನಮಗೆ ಯಾವ ತೊಂದರೆಯೂ ಆಗದ ಹಾಗೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಲಿಖಿತ್‌ ನುಡಿಯುತ್ತಾರೆ.

ಒಲಿಂಪಿಕ್ಸ್‌ ಮುಂದೂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಟೋಕಿಯೊ ಕೂಟ ಮುಂದಕ್ಕೆ ಹಾಕಿರುವುದರಿಂದ 100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಅರ್ಹತೆ ಗಳಿಸುವ ನನ್ನ ಕನಸು ಜೀವಂತವಾಗಿದೆ.2021ರ ಮಾರ್ಚ್‌–ಏಪ್ರಿಲ್‌ನಲ್ಲಿ ಅರ್ಹತಾ ಟೂರ್ನಿ ಇದೆ. ಅದರಲ್ಲಿ ಉತ್ತಮ ಸಾಮರ್ಥ್ಯ ತೋರುವ ಗುರಿ ಇದೆ. ಇದಕ್ಕಾಗಿ ಕಠಿಣ ತಾಲೀಮು ನಡೆಸುತ್ತಿದ್ದೇನೆ’ ಎಂದರು.

‘ಈಜುಕೊಳದಲ್ಲಿ ನೀರು ಸ್ವಚ್ಛವಾಗಿರುತ್ತದೆ. ಒಳಗೆ ಹೋದಂತೆಲ್ಲಾ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿರುತ್ತದೆ. ಆದರೆ ಹೊಂಡದ ನೀರಿನಲ್ಲಿ ಯಾವುದೂ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಏಕಾಗ್ರತೆ ಮತ್ತು ಸೂಕ್ಷ್ಮತೆ ಮೈಗೂಡಿಸಿಕೊಳ್ಳುವುದಕ್ಕೆ ಇದು ಸಹಕಾರಿ’ ಎಂದೂ ಲಿಖಿತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.