ADVERTISEMENT

ಥಾಯ್ಲೆಂಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಸೈನಾ, ಶ್ರೀಕಾಂತ್‌ಗೆ ನಿರಾಸೆ

ಪಿಟಿಐ
Published 22 ಜನವರಿ 2020, 19:45 IST
Last Updated 22 ಜನವರಿ 2020, 19:45 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಬ್ಯಾಂಕಾಕ್‌: ಥಾಯ್ಲೆಂಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ದಿನವೇ ಭಾರತದ ಸವಾಲು ಅಂತ್ಯಕಂಡಿದೆ.

ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಮತ್ತು ಸಮೀರ್‌ ವರ್ಮಾ ಅವರು ಆರಂಭಿಕ ಸುತ್ತುಗಳಲ್ಲೇ ಪರಾಭವಗೊಂಡಿದ್ದಾರೆ.

ಬುಧವಾರ ನಡೆದ ಹಣಾಹಣಿಯಲ್ಲಿ ಐದನೇ ಶ್ರೇಯಾಂಕದ ಆಟಗಾರ ಶ್ರೀಕಾಂತ್‌ 21–12, 14–21, 12–21ರಲ್ಲಿ ಇಂಡೊನೇಷ್ಯಾದ ಶೆಸರ್‌ ಹಿರೇನ್‌ ರುಸ್ತಾವಿಟೊ ವಿರುದ್ಧ ಸೋತರು. ಈ ಹೋರಾಟ 48 ನಿಮಿಷ ನಡೆಯಿತು.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಯ ಮೇಲೆ ಕಣ್ಣಿಟ್ಟಿರುವ ಶ್ರೀಕಾಂತ್ ಮೊದಲ ಗೇಮ್‌ನಲ್ಲಿ ಮಿಂಚಿನ ಸಾಮರ್ಥ್ಯ ತೋರಿದರು. ಇದರಿಂದ ಎದೆಗುಂದದ ಶೆಸರ್‌ ನಂತರದ ಎರಡು ಗೇಮ್‌ಗಳಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.

ಶ್ರೀಕಾಂತ್‌, ಈ ಋತುವಿನಲ್ಲಿ ಸತತ ಮೂರನೇ ಬಾರಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದಂತಾಗಿದೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಆಟಗಾರ್ತಿ ಸೈನಾ 13–21, 21–17, 15–21ರಲ್ಲಿ ಡೆನ್ಮಾರ್ಕ್‌ನ ಲಿನೆ ಹೊಜಮಾರ್ಕ್‌ ಜಾರೆಸ್‌ಫೆಡ್ತ್‌ ಎದುರು ನಿರಾಸೆ ಕಂಡರು.

ಮೊದಲ ಗೇಮ್‌ನಲ್ಲಿ ಸೋತರೂ ಎದೆಗುಂದದೆ ಆಡಿದ ಸೈನಾ, ಎರಡನೇ ಗೇಮ್‌ ಗೆದ್ದರು. ಹೀಗಾಗಿ 1–1 ಸಮಬಲ ಕಂಡುಬಂತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 29ನೇ ಸ್ಥಾನದಲ್ಲಿದ್ದ ಲಿನೆ, ಮೂರನೇ ಗೇಮ್‌ನಲ್ಲಿ ಚುರುಕಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಭಾರತದ ಆಟಗಾರ್ತಿಯನ್ನು ಕಂಗೆಡಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನ ಹೊಂದಿರುವ ಸೈನಾ ಈ ಪಂದ್ಯಕ್ಕೂ ಮುನ್ನ ಲಿನೆ ಎದುರು 4–0 ಗೆಲುವಿನ ದಾಖಲೆ ಹೊಂದಿದ್ದರು.

ಇನ್ನೊಂದು ಪಂದ್ಯದಲ್ಲಿ ಸಮೀರ್‌ 16–21, 15–21ರಲ್ಲಿ ಮಲೇಷ್ಯಾದ ಲೀ ಜಿ ಜಿಯಾ ಎದುರು ಮಣಿದರು.

39 ನಿಮಿಷಗಳ ಹೋರಾಟದಲ್ಲಿ ಸಮೀರ್‌ ಅವರು ಎದುರಾಳಿಗೆ ದಿಟ್ಟ ಪೈಪೋಟಿ ನೀಡಲು ವಿಫಲರಾದರು.

ಎಚ್‌.ಎಸ್‌.ಪ್ರಣಯ್‌ ಕೂಡ ಮೊದಲ ಮೊದಲ ಸುತ್ತಿನಲ್ಲೇ ನಿರಾಸೆ ಕಂಡರು. ಅವರು 17–21, 22–20, 19–21ರಲ್ಲಿ ಮಲೇಷ್ಯಾದ ಲೀವ್‌ ಡರೆನ್‌ ಎದುರು ಸೋತರು.

ಮೊದಲ ಗೇಮ್‌ನಲ್ಲಿ ಮುಗ್ಗರಿಸಿದ್ದ ಪ್ರಣಯ್‌, ಎರಡನೇ ಗೇಮ್‌ನಲ್ಲಿ ಎದುರಾಳಿಗೆ ತಿರುಗೇಟು ನೀಡಿದರು. ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲೂ ದಿಟ್ಟ ಸಾಮರ್ಥ್ಯ ತೋರಿದ ಭಾರತದ ಆಟಗಾರ 19–19ರಲ್ಲಿ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ಚುರುಕಿನ ಆಟ ಆಡಿದ ಡರೆನ್‌ ಎರಡು ಪಾಯಿಂಟ್ಸ್‌ ಗಳಿಸಿ ಪ್ರಣಯ್‌ ಅವರ ಗೆಲುವಿನ ಕನಸಿಗೆ ತಣ್ಣೀರು ಸುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.