ADVERTISEMENT

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಶುಭಾರಂಭದ ನಿರೀಕ್ಷೆಯಲ್ಲಿ ಸೈನಾ, ಸಿಂಧು

ಕೊರೊನಾ ಕರಿನೆರಳಿನಲ್ಲಿ

ಪಿಟಿಐ
Published 11 ಜನವರಿ 2022, 5:28 IST
Last Updated 11 ಜನವರಿ 2022, 5:28 IST
ಪಿ.ವಿ.ಸಿಂಧು– ಪಿಟಿಐ ಚಿತ್ರ
ಪಿ.ವಿ.ಸಿಂಧು– ಪಿಟಿಐ ಚಿತ್ರ   

ನವದೆಹಲಿ: ಕೋವಿಡ್‌–19 ಕಾರಣದಿಂದ ಎರಡು ಬಾರಿ ರದ್ದಾಗಿದ್ದ ಇಂಡಿಯಾ ಓಪನ್ ಟೂರ್ನಿಯು ಮತ್ತೆ ಆರಂಭವಾಗಲಿದೆ. ಮಂಗಳವಾರ ಟೂರ್ನಿಗೆ ಚಾಲನೆ ಸಿಗಲಿದ್ದು, ತಾರಾ ಆಟಗಾರಕಿದಂಬಿ ಶ್ರೀಕಾಂತ್‌ ಮತ್ತು ಪಿ.ವಿ.ಸಿಂಧು ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.

ಹೊಸ ರೂಪಾಂತರ ಓಮೈಕ್ರಾನ್‌ ಪ್ರಕರಣಗಳು ಸೇರಿದಂತೆದೇಶದಲ್ಲಿ ತ್ವರಿತ ವೇಗದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಮೂರನೇ ಅಲೆಯ ಕರಿನೆರಳಿನಲ್ಲಿ ಟೂರ್ನಿ ನಡೆಯುತ್ತಿದೆ. ಅಂದಾಜು ₹ 2.90 ಕೋಟಿ ಬಹುಮಾನ ಮೊತ್ತದ ಸೂಪರ್ 500 ಟೂರ್ನಿಯಲ್ಲಿ ರ‍್ಯಾಂಕಿಂಗ್‌ ಪಾಯಿಂಟ್ಸ್ ಗಳಿಸುವ ಅವಕಾಶವೂ ಆಟಗಾರರಿಗಿದೆ. ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ಪ್ರೇಕ್ಷಕರಿಗೆ ಅವಕಾಶ ನೀಡಲಾಗಿಲ್ಲ. ಕೊರೊನಾ ಕಾರಣದಿಂದಾಗಿ 2020 ಮತ್ತು 2021ರ ಆವೃತ್ತಿಗಳು ನಡೆದಿರಲಿಲ್ಲ.

ಭಾರತದ ಬಿ. ಸಾಯಿ ಪ್ರಣೀತ್ ಮತ್ತು ಡಬಲ್ಸ್ ಆಟಗಾರ ಧ್ರುವ ರಾವತ್ ಅವರಿಗೆಕೋವಿಡ್‌ ದೃಢಪಟ್ಟಿದ್ದು, ಈಗಾಗಲೇ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಭಾರತದ ಇನ್ನೂ ಕೆಲವು ಆಟಗಾರರು ಆರ್‌ಟಿ-ಪಿಸಿಆರ್ ಪರೀಕ್ಷೆಗಳ ವರದಿಗಾಗಿ ಕಾಯುತ್ತಿದ್ದಾರೆ. ಕೋವಿಡ್‌ ಭೀತಿಯ ಮಧ್ಯೆಯೂ ಭಾರತ ಮತ್ತು ವಿದೇಶದ ಪ್ರಮುಖ ಆಟಗಾರರು ಕಣಕ್ಕಿಳಿಯಲು ರಾಷ್ಟ್ರ ರಾಜಧಾನಿ ತಲುಪಿದ್ದಾರೆ.

ADVERTISEMENT

ಹಾಲಿ ವಿಶ್ವ ಚಾಂಪಿಯನ್ ಸಿಂಗಪುರದ ಲೋಹ್ ಕೀನ್ ಯೂ, ಮೂರು ಬಾರಿಯ ವಿಶ್ವ ಚಾಂಪಿಯನ್ ಇಂಡೋನೇಷ್ಯಾದ ಜೋಡಿ ಮೊಹಮ್ಮದ್ ಎಹಸಾನ್ ಮತ್ತು ಹೆಂಡ್ರಾ ಸೆತಿಯಾವಾನ್, ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಈ ಯಿ ಸೇರಿದಂತೆ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಹೈದರಾಬಾದ್‌ನ 26 ವರ್ಷದ ಸಿಂಧು, 2017ರಲ್ಲಿ ಮೊದಲ ಬಾರಿ ಈ ಟೂರ್ನಿಯಲ್ಲಿ ಪ್ರಶಸ್ತಿ ಒಲಿಸಿಕೊಂಡಿದ್ದರು. ಈ ಬಾರಿ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಅವರು ಸ್ವದೇಶದ ಆಟಗಾರ್ತಿ ಶ್ರೀಕೃಷ್ಣಪ್ರಿಯಾ ಕುದರವಳ್ಳಿ ಅವರನ್ನು ಎದುರಿಸಲಿದ್ದಾರೆ. ಲಂಡನ್‌ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ನೆಹ್ವಾಲ್‌ ಅವರು ಅಮೆರಿಕದ ಐರಿಸ್‌ ವಾಂಗ್ ಅವರಿಗೆ ಎದುರಾಗುವ ಸಾಧ್ಯತೆಯಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಅವರು ಮೊದಲ ಪಂದ್ಯದಲ್ಲಿ ಭಾರತದ ಸಿರಿಲ್ ವರ್ಮಾ ಸವಾಲು ಮೀರಬೇಕಿದೆ. ಲಕ್ಷ್ಯ ಸೇನ್‌, ಎಚ್‌.ಎಸ್‌,ಪ್ರಣಯ್‌, ಸಮೀರ್ ವರ್ಮಾ, ಸೌರಭ್ ವರ್ಮಾ ಕೂಡ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಪ್ರತಿದಿನ ಕೋವಿಡ್‌ ಪರೀಕ್ಷೆ: ಆಟಗಾರರು, ಪಂದ್ಯದ ಅಧಿಕಾರಿಗಳು, ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಮತ್ತು ಬಿಡಬ್ಲ್ಯುಎಫ್ ಅಧಿಕಾರಿಗಳು, ನೆರವು ಸಿಬ್ಬಂದಿ ಸೇರಿದಂತೆಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಪ್ರತಿದಿನ ಕೋವಿಡ್‌ ಪರೀಕ್ಷೆ ಕಡ್ಡಾಯ ಎಂದುಬಿಎಐ ಹೇಳಿದೆ.

2019ರ ಪ್ರಶಸ್ತಿ ವಿಜೇತರು
ಪುರುಷರ ಸಿಂಗಲ್ಸ್:
ವಿಕ್ಟರ್‌ ಅಕ್ಸೆಲ್ಸೆನ್‌ (ಡೆನ್ಮಾರ್ಕ್‌)
ಮಹಿಳಾ ಸಿಂಗಲ್ಸ್: ರಚನಾಕ್ ಇಂಟನಾನ್‌

ಟೂರ್ನಿಯಲ್ಲಿ ಭಾರತದ ಸಾಧನೆ (ಪ್ರಶಸ್ತಿ ವಿಜೇತರು)

ಪುರುಷರ ಸಿಂಗಲ್ಸ್
ಪ್ರಕಾಶ್‌ ಪಡುಕೋಣೆ
(1981)
ಕಿದಂಬಿ ಶ್ರೀಕಾಂತ್‌ (2015)

ಮಹಿಳಾ ಸಿಂಗಲ್ಸ್
ಸೈನಾ ನೆಹ್ವಾಲ್‌
(2010, 2015)
ಪಿ.ವಿ.ಸಿಂಧು (2017)

ಮಿಶ್ರ ಡಬಲ್ಸ್
ವಿ.ದಿಜು– ಜ್ವಾಲಾ ಗುಟ್ಟಾ
(2010)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.