ADVERTISEMENT

ಕ್ರೀಡಾಪಟುಗಳ ಮೇಲೂ ಕವಿದ ಕೋವಿಡ್‌ ಕಾರ್ಮೋಡ

ಒಲಿಂಪಿಕ್‌ನಲ್ಲಿ ಪದಕ ಜಯಿಸಿದ್ದ ಕುಸ್ತಿ‍ಪಟು ಸಾಕ್ಷಿ ಮಲಿಕ್‌ ಆತಂಕ

ಜಿ.ಶಿವಕುಮಾರ
Published 2 ಮಾರ್ಚ್ 2020, 19:45 IST
Last Updated 2 ಮಾರ್ಚ್ 2020, 19:45 IST
ಸಾಕ್ಷಿ ಮಲಿಕ್‌
ಸಾಕ್ಷಿ ಮಲಿಕ್‌   

ಬೆಂಗಳೂರು: ಒಲಿಂಪಿಕ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಮೊದಲ ಮಹಿಳಾ ಕುಸ್ತಿಪಟು ಎಂಬ ಹಿರಿಮೆ ಸಾಕ್ಷಿ ಮಲಿಕ್‌ ಅವರದ್ದು.

ಕಾಮನ್‌ವೆಲ್ತ್‌, ಏಷ್ಯನ್‌ ಚಾಂಪಿಯನ್‌ಷಿಪ್‌ ಹಾಗೂ ಇತರೆ ಟೂರ್ನಿಗಳಲ್ಲೂ ಪದಕಗಳನ್ನು ಜಯಿಸಿರುವ 27 ವರ್ಷ ವಯಸ್ಸಿನ ಸಾಕ್ಷಿ, ಪದ್ಮಶ್ರೀ ಮತ್ತು ರಾಜೀವ್‌ ಗಾಂಧಿ ಖೇಲ್‌ ರತ್ನ ಗೌರವಗಳಿಗೆ ಭಾಜನರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ಬೆಂಗಳೂರಿಗೆ ಬಂದಿದ್ದ ಅವರು ‘‍ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಕೋವಿಡ್‌ ವೈರಸ್‌ನಿಂದ ಕ್ರೀಡಾಪಟುಗಳಲ್ಲೂ ಭೀತಿ ಹುಟ್ಟಿದೆಯೇ?
ಖಂಡಿತವಾಗಿ. ಕೋವಿಡ್‌ ವೈರಸ್‌ ವಿಶ್ವದಾದ್ಯಂತ ಹಬ್ಬುತ್ತಿದೆ. ಸಾವಿರಾರು ಮಂದಿಯ ಜೀವವನ್ನೂ ಬಲಿ ಪಡೆದಿದೆ. ಹೀಗಾಗಿ ಅಥ್ಲೀಟ್‌ಗಳಲ್ಲೂ ಭೀತಿ ಹುಟ್ಟಿದೆ. ಅದು ಸಹಜ ಕೂಡ. ಇದು ಒಲಿಂಪಿಕ್‌ ವರ್ಷ. ಹೀಗಾಗಿ ಟೋಕಿಯೊ ಕೂಟಕ್ಕೆ ಅರ್ಹತೆ ಗಳಿಸುವತ್ತ ಎಲ್ಲರೂ ಚಿತ್ತ ನೆಟ್ಟಿದ್ದಾರೆ. ಕೋವಿಡ್‌ನಿಂದಾಗಿ ಈಗಾಗಲೇ ಹಲವು ಟೂರ್ನಿಗಳನ್ನು ರದ್ದು ಮಾಡಲಾಗಿದೆ. ಕೆಲವನ್ನು ಮುಂದೂಡಲಾಗಿದೆ. ಈ ಬೆಳವಣಿಗೆಗಳಿಂದಾಗಿ ಒಲಿಂಪಿಕ್‌ ಅರ್ಹತೆಯ ಅವಕಾಶ ಕೈತಪ್ಪುವ ಆತಂಕ ಕ್ರೀಡಾಪಟುಗಳಲ್ಲಿ ಮನೆ ಮಾಡಿದೆ.

ADVERTISEMENT

ಟೋಕಿಯೊ ಒಲಿಂಪಿಕ್‌ಗೆ ಅರ್ಹತೆ ಗಳಿಸುವ ಹಾದಿ ಕಠಿಣವಾಗಿದೆಯಲ್ಲ?
ಜನವರಿಯಲ್ಲಿ ಲಖನೌದಲ್ಲಿ ನಡೆದಿದ್ದ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಆಗಲಿಲ್ಲ. ಹೀಗಾಗಿ ಒಲಿಂಪಿಕ್‌ ಅರ್ಹತೆಯ ದಾರಿ ಕಷ್ಟವಾಗಿದೆ. ಕುಸ್ತಿಯಲ್ಲಿ ಕೆಲವೊಮ್ಮೆ ಪಂದ್ಯದ ದಿನ ಅಚ್ಚರಿಯ ಫಲಿತಾಂಶಗಳು ಹೊರ ಬೀಳುತ್ತವೆ. ಸೋನಮ್‌ ಮಲಿಕ್‌ ವಿರುದ್ಧದ 58 ಕೆ.ಜಿ.ಫ್ರೀಸ್ಟೈಲ್‌ ಪಂದ್ಯದಲ್ಲಿ 6–4ರಿಂದ ಮುಂದಿದ್ದ ನಾನು ಬಳಿಕ ಹಲವು ತಪ್ಪುಗಳನ್ನು ಮಾಡಿ ಎದುರಾಳಿಗೆ ಪಾಯಿಂಟ್ಸ್‌ ಬಿಟ್ಟುಕೊಟ್ಟೆ. ಹೀಗಾಗಿ ನಿರಾಸೆ ಎದುರಾಗಿತ್ತು. ಏಷ್ಯನ್‌ ಚಾಂಪಿಯನ್‌ಷಿಪ್‌ ಮತ್ತು ರೋಮ್‌ನಲ್ಲಿ ಆಯೋಜನೆಯಾಗಿದ್ದ ಮಟಿಯೊ ಪೆಲಿಕಾನ್‌ ಸ್ಮಾರಕ ಟೂರ್ನಿಗಳಲ್ಲಿ ಆಡುವ ಅವಕಾಶ ಕೈತಪ್ಪಿತ್ತು.

ಒಲಿಂಪಿಕ್‌ಗೆ ಅರ್ಹತೆ ಗಳಿಸಲು ಇನ್ನು ಅವಕಾಶ ಇದೆಯೇ?
ಮೇ ತಿಂಗಳ ಕೊನೆಯಲ್ಲಿ ಬಲ್ಗೇರಿಯಾದಲ್ಲಿ ಟೂರ್ನಿಯೊಂದು ನಡೆಯಲಿದೆ. ಅದರಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಟೋಕಿಯೊ ಟಿಕೆಟ್‌ ಸಿಗಲಿದೆ. ಅದು ಕೊನೆಯ ಅವಕಾಶ. ಆ ಟೂರ್ನಿಯತ್ತಲೇ ಈಗ ಚಿತ್ತ ನೆಟ್ಟಿದ್ದೇನೆ.

ಸತತ ವೈಫಲ್ಯಕ್ಕೆ ಕಾರಣವೇನು?
ಮುಖ್ಯವಾಗಿ ಆತ್ಮವಿಶ್ವಾಸದ ಕೊರತೆ. ಜೊತೆಗೆ ಪಂದ್ಯದ ವೇಳೆ ಎದುರಾಳಿ ಮುನ್ನಡೆ ಸಾಧಿಸಿದಾಗ ಹೆಚ್ಚು ಆತಂಕಕ್ಕೆ ಒಳಗಾಗುತ್ತಿದ್ದೇನೆ. ಹೀಗಾಗಿ ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ಆಡಲು ಆಗುತ್ತಿಲ್ಲ. ಕ್ರೀಡಾಪಟುಗಳ ಬದುಕಿನಲ್ಲಿ ಏಳು ಬೀಳು ಸಹಜ. ಹಾಗಂತ ಎದೆಗುಂದಬಾರದು. ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುಂದಡಿ ಇಡಬೇಕು.

ಒಲಿಂಪಿಕ್‌ ಪದಕದ ಕನಸು ಕೈಗೂಡಿದೆ. ಸಾಧಿಸಬೇಕಾದದ್ದು ಮತ್ತೇನಿದೆ?
ಕುಸ್ತಿ, ನನ್ನ ಉಸಿರಲ್ಲಿ ಬೆರೆತು ಹೋಗಿದೆ. ಎಳವೆಯಿಂದಲೂ ಈ ಕ್ರೀಡೆಯಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದೇನೆ. ಸಾಧಿಸಬೇಕಾದದ್ದೂ ಇನ್ನೂ ಇದೆ. ಏಷ್ಯನ್‌ ಕ್ರೀಡಾಕೂಟ ಸೇರಿದಂತೆ ಕೆಲ ಕೂಟಗಳಲ್ಲಿ ಪದಕ ಗೆಲ್ಲಲು ಆಗಿಲ್ಲ. ಆ ಕೊರನ್ನು ನೀಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

2016ರ ರಿಯೊ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ನಿಮ್ಮ ಬದುಕಿನಲ್ಲಾಗಿರುವ ಬದಲಾವಣೆಗಳೇನು?
ಹೋದಲೆಲ್ಲಾ ಜನ ಗುರುತಿಸುತ್ತಾರೆ. ಅಪಾರ ಪ್ರೀತಿ ತೋರುತ್ತಾರೆ. ಜೊತೆಗೆ ನನ್ನಿಂದ ಇನ್ನಷ್ಟು ಪದಕಗಳನ್ನೂ ನಿರೀಕ್ಷಿಸುತ್ತಾರೆ. ಗೆದ್ದಾಗ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸೋತಾಗ ಟೀಕೆಗಳ ಮಳೆಯನ್ನೇ ಸುರಿಸುತ್ತಾರೆ. ಹೀಗಾಗಿ ಒತ್ತಡವೂ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.