ADVERTISEMENT

ಹಾಂಗ್‌ಕಾಂಗ್‌ ಓಪನ್‌: ಲಕ್ಷ್ಯ ಸೇನ್‌ ರನ್ನರ್ಸ್‌ ಅಪ್‌

ಪ್ರಶಸ್ತಿ ಹೊಸ್ತಿಲಲ್ಲಿ ಮುಗ್ಗರಿಸಿದ ಸಾತ್ವಿಕ್‌–ಚಿರಾಗ್‌ ಜೋಡಿ

ಪಿಟಿಐ
Published 14 ಸೆಪ್ಟೆಂಬರ್ 2025, 15:49 IST
Last Updated 14 ಸೆಪ್ಟೆಂಬರ್ 2025, 15:49 IST
ಭಾರತದ ಲಕ್ಷ್ಯ ಸೇನ್‌ –ಎಕ್ಸ್‌ ಚಿತ್ರ
ಭಾರತದ ಲಕ್ಷ್ಯ ಸೇನ್‌ –ಎಕ್ಸ್‌ ಚಿತ್ರ   

ಹಾಂಗ್‌ಕಾಂಗ್‌: ಭಾರತದ ಅಗ್ರ ಸಿಂಗಲ್ಸ್‌ ಆಟಗಾರ ಲಕ್ಷ್ಮ ಸೇನ್‌ ಅವರು ಭಾನುವಾರ ಹಾಂಗ್‌ಕಾಂಗ್‌ ಓಪನ್ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ರನ್ನರ್ ಅಪ್‌ನೊಂದಿಗೆ ಅಭಿಯಾನ ಮುಗಿಸಿದರು. ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿಯೂ ಪ್ರಶಸ್ತಿ ಹೊಸ್ತಿಲಲ್ಲಿ ಮುಗ್ಗರಿಸಿತು.

ಎರಡು ವರ್ಷಗಳಲ್ಲಿ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ಫೈನಲ್ ತಲುಪಿದ ಸೇನ್‌ 15-21, 12-21ರಲ್ಲಿ ನೇರ ಗೇಮ್‌ಗಳಿಂದ ಚೀನಾದ ಲಿ ಶಿ ಫೆಂಗ್ ಅವರಿಗೆ ಮಣಿದರು. ವಿಶ್ವದ 20ನೇ ಕ್ರಮಾಂಕದ ಸೇನ್‌, ನಾಲ್ಕನೇ ರ‍್ಯಾಂಕ್‌ನ ಆಟಗಾರನಿಗೆ ಹೆಚ್ಚಿನ ಪ್ರತಿರೋಧ ತೋರದೆ ನಿರೀಕ್ಷೆಗಿಂತ ಬೇಗನೆ ಸೋಲೊಪ್ಪಿಕೊಂಡರು. 

2021ರ ವಿಶ್ವ ಚಾಂಪಿಯನ್‌ಷಿಪ್‌ ಕಂಚು ವಿಜೇತ ಸೇನ್‌, 2023ರ ಜುಲೈನಲ್ಲಿ ಕೊನೆಯ ಬಾರಿಗೆ ಸೂಪರ್ 500 ಮಟ್ಟದ ಟೂರ್ನಿ ಗೆದ್ದಿದ್ದರು. ಕಳೆದ ನವೆಂಬರ್‌ನಲ್ಲಿ ಸೈಯದ್ ಮೋದಿ ಸೂಪರ್ 300 ಟೂರ್ನಿಯ ನಂತರ ಲಕ್ಷ್ಯ ಅವರಿಗೆ ಇದು ಮೊದಲ ಫೈನಲ್ ಆಗಿತ್ತು.

ADVERTISEMENT

ಜೂನಿಯರ್‌ ದಿನದಿಂದ ಸೇನ್‌ ಮತ್ತು ಫೆಂಗ್‌ ಅವರಿಗೆ ಇದು 14ನೇ ಮುಖಾಮುಖಿಯಾಗಿತ್ತು. ಈ ಟೂರ್ನಿಗೆ ಮುನ್ನ ಭಾರತದ ಆಟಗಾರ 7–6ರ ಗೆಲುವಿನ ದಾಖಲೆ ಹೊಂದಿದ್ದರು. ಆದರೆ, ಈ ಋತುವಿನಲ್ಲಿ ಆಲ್‌ ಇಂಗ್ಲೆಂಡ್‌, ಚೀನಾ ಓಪನ್‌ ಬಳಿಕ ಸೇನ್‌ ಅವರಿಗೆ ಇದು ಸತತ ಮೂರನೇ ಸೋಲಾಗಿದೆ.

24 ವರ್ಷದ ಸೇನ್‌ ಮೊದಲ ಗೇಮ್‌ನಲ್ಲಿ 4–0 ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದಿದ್ದರು. ನಂತರದಲ್ಲಿ ಲಯ ಕಂಡುಕೊಂಡ ಚೀನಿ ಆಟಗಾರ, ನಿಖರ ಆಟ ಪ್ರದರ್ಶಿಸಿ ಸಮಬಲ (8–8) ಸಾಧಿಸಿದರು. ಒಂದು ಹಂತದಲ್ಲಿ ಸತತ ಐದು ಅಂಕ ಗಳಿಸಿದ ಭಾರತದ ಆಟಗಾರ 14–10ರಲ್ಲಿ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿದರು. ಆದರೆ, ಮರುಹೋರಾಟ ನಡೆಸಿದ ಫೆಂಗ್ ಮೇಲುಗೈ ಸಾಧಿಸಿದರು. ಎರಡನೇ ಗೇಮ್‌ನಲ್ಲೂ ಆರಂಭದ ಮುನ್ನಡೆ ಪಡೆದ ಸೇನ್, ನಂತರ ಅದೇ ವೇಗವನ್ನು ಕಾಯ್ದುಕೊಳ್ಳಲು ವಿಫಲವಾದರು. 

ಕಳೆದ ತಿಂಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾತ್ವಿಕ್‌–ಚಿರಾಗ್‌ ಜೋಡಿಯು ಫೈನಲ್‌ನಲ್ಲಿ 21-19, 14-21, 17-21ರಲ್ಲಿ ಮೂರು ಸೆಟ್‌ಗಳ ಹಣಾಹಣಿಯಲ್ಲಿ ಚೀನಾದ ಲಿಯಾಂಗ್ ವೀ ಕೆಂಗ್‌– ವಾಂಗ್‌ ಚಾಂಗ್ ಅವರಿಗೆ ಶರಣಾಯಿತು. ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿದ್ದ ಭಾರತದ ಆಟಗಾರರು ನಂತರದ ಎರಡೂ ಗೇಮ್‌ಗಳಲ್ಲಿ ಲಯ ತಪ್ಪಿದರು. ಒಲಿಂಪಿಕ್‌ ಬೆಳ್ಳಿ ವಿಜೇತ ಜೋಡಿಯು 61 ನಿಮಿಷದಲ್ಲಿ ಈ ಪಂದ್ಯ ಗೆದ್ದುಕೊಂಡಿತು.

16 ತಿಂಗಳ ಹಿಂದೆ ಥಾಯ್ಲೆಂಡ್‌ ಓಪನ್‌ ಗೆದ್ದ ನಂತರ ಸಾತ್ವಿಕ್ ಮತ್ತು ಚಿರಾಗ್ ಜೋಡಿಗೆ ಇದು ಮೊದಲ ಫೈನಲ್ ಆಗಿತ್ತು. ಸೂಪರ್‌ 500 ಮಟ್ಟದ ಟೂರ್ನಿಯಲ್ಲಿ ಐದನೇ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ಭಾರತದ ಆಟಗಾರರಿಗೆ ಇದು ಮೊದಲ ಸೋಲಾಗಿದೆ. ಈ ಹಿಂದೆ ನಾಲ್ಕೂ ಫೈನಲ್‌ಗಳಲ್ಲಿ ಗೆದ್ದಿದ್ದರು. 

ಈ ಋತುವಿನ ಆರು ಟೂರ್ನಿಗಳಲ್ಲಿ ಸೆಮಿಫೈನಲ್‌ ತಲುಪಿದ ಸಾತ್ವಿಕ್‌– ಚಿರಾಗ್‌ ಜೋಡಿಯು ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದೇ ಚೀನಿ ಆಟಗಾರರನ್ನು ಮೂರು ಗೇಮ್‌ಗಳ ಹಣಾಹಣಿಯಲ್ಲಿ ಮಣಿಸಿತ್ತು. ಎರಡು ವಾರಗಳ ಬಳಿಕ ಅದೇ ಜೋಡಿಯ ವಿರುದ್ಧ ಸೋಲೊಪ್ಪಿಕೊಂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.