ADVERTISEMENT

ಬಿಡಬ್ಲ್ಯುಎಫ್‌ ರ್‍ಯಾಂಕಿಂಗ್‌: ಅಗ್ರ 10ಕ್ಕೆ ಮರಳಿದ ಸಾತ್ವಿಕ್‌–ಚಿರಾಗ್‌ ಜೋಡಿ

ಪಿಟಿಐ
Published 29 ಜುಲೈ 2025, 13:38 IST
Last Updated 29 ಜುಲೈ 2025, 13:38 IST
ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿ
ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿ   

ನವದೆಹಲಿ: ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತ, ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿಯು ಬಿಡಬ್ಲ್ಯುಎಫ್‌ ಪುರುಷರ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ಅಗ್ರ 10ಕ್ಕೆ ಮರಳಿದ್ದಾರೆ.

ಕಳೆದ ವಾರ ನಡೆದ ಚೀನಾ ಓಪನ್‌ನಲ್ಲಿ ಸೆಮಿಫೈನಲ್‌ ತಲುಪಿದ್ದ ಈ ಜೋಡಿಯು, ಮೂರು ಸ್ಥಾನಗಳಷ್ಟು ಏರಿಕೆ ಕಂಡಿದೆ.

ವಿಶ್ವದ ಮಾಜಿ ನಂ.1 ಜೋಡಿಯಾಗಿರುವ ಸಾತ್ವಿಕ್‌–ಚಿರಾಗ್‌, ಈ ಋತುವಿನಲ್ಲಿ ಬಿಡಬ್ಲ್ಯುಎಫ್‌ ಟೂರ್‌ ಮಟ್ಟದ ನಾಲ್ಕು ಟೂರ್ನಿಗಳಲ್ಲಿ ಸೆಮಿಫೈನಲ್‌ ತಲುಪಿದ್ದಾರೆ. 

ADVERTISEMENT

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಗ್ರಮಾನ್ಯ ಆಟಗಾರ ಲಕ್ಷ್ಯ ಸೇನ್‌ ಅವರು ಎರಡು ಸ್ಥಾನಗಳಷ್ಟು ಬಡ್ತಿ ಪಡೆದಿದ್ದು, 17ನೇ ಕ್ರಮಾಂಕದಲ್ಲಿದ್ದಾರೆ. ಎಚ್‌.ಎಸ್‌. ಪ್ರಣಯ್‌ ಅವರಿಗೆ 33ನೇ ಸ್ಥಾನ ದೊರೆತಿದೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ 17 ವರ್ಷ ವಯಸ್ಸಿನ ಉನ್ನತಿ ಹೂಡಾ ವೃತ್ತಿ ಜೀವನದ ಶ್ರೇಷ್ಠ 31ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಉನ್ನತಿ ಅವರು, ಚೀನಾ ಓಪನ್‌ನ ಪ್ರಿ–ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪಿ.ವಿ. ಸಿಂಧು ಅವರನ್ನು ಮಣಿಸಿ ಗಮನ ಸೆಳೆದಿದ್ದರು. ಸಿಂಧು ಅವರು 15ನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯು 11ನೇ ಕ್ರಮಾಂಕದಲ್ಲಿಯೇ ಮುಂದುವರಿದಿದ್ದಾರೆ. ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ ಜೋಡಿಗೆ 45ನೇ ಸ್ಥಾನ ದೊರೆತಿದೆ.

ಉನ್ನತಿ ಹೂಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.