ADVERTISEMENT

ವಿಶ್ವ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಸಾತ್ವಿಕ್‌– ಚಿರಾಗ್

ಭಾರತಕ್ಕೆ ಪದಕ ಖಚಿತಪಡಿಸಿದ ಜೋಡಿ

ಪಿಟಿಐ
Published 30 ಆಗಸ್ಟ್ 2025, 14:01 IST
Last Updated 30 ಆಗಸ್ಟ್ 2025, 14:01 IST
<div class="paragraphs"><p><strong>ವಿಜಯೋತ್ಸಾಹ...</strong> ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಗೆದ್ದ ನಂತರ ಸಂಭ್ರಮಿಸಿದ್ದು ಹೀಗೆ. </p></div>

ವಿಜಯೋತ್ಸಾಹ... ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಗೆದ್ದ ನಂತರ ಸಂಭ್ರಮಿಸಿದ್ದು ಹೀಗೆ.

   

ಎಎಫ್‌ಪಿ ಚಿತ್ರ

ಪ್ಯಾರಿಸ್‌: ಭಾರತದ ಅಗ್ರ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ದಾಪುಗಾಲಿಡುವ ಮೂಲಕ ಪದಕ ಖಚಿತಪಡಿಸಿಕೊಂಡರು. ಭಾರತದ ಆಟಗಾರರು ನೇರ ಗೇಮ್‌ಗಳಿಂದ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತರಾದ ಆರನ್ ಚಿಯಾ ಮತ್ತು ಸೊ ವೂಡಿ ಯಿಕ್ ಅವರನ್ನು ಸೋಲಿಸಿದರು.

ADVERTISEMENT

ಒಂಬತ್ತನೇ ಶ್ರೇಯಾಂಕದ ಸಾತ್ವಿಕ್‌– ಚಿರಾಗ್ ಜೋಡಿ ಶುಕ್ರವಾರ ತಡರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿ 21–12, 21–19 ರಿಂದ ಮಲೇಷ್ಯಾದ ಆಟಗಾರರನ್ನು ಸೋಲಿಸಿತು. ಆ ಮೂಲಕ ವರ್ಷದ ಹಿಂದೆ ಇದೇ ನಗರದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಚಿಯಾ ಮತ್ತು ಸೊ ಕೈಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

‘ಸಂತಸದ ಭಾವನೆ ಮೂಡಿದೆ. ಕೊನೆಗೂ ನಾವು ಉತ್ತಮ ಆಟ ಕಂಡುಕೊಂಡೆವು. ಈ ಪಂದ್ಯ  ಒಲಿಂಪಿಕ್ಸ್‌ನ ರೀ ಮ್ಯಾಚ್‌ನಂತೆ ಇತ್ತು. ಅದೇ ಕ್ರೀಡಾಂಗಣ. ಅದೇ ಅಂಕಣ. ಸರಿಯಾಗಿ ವರ್ಷದ ಹಿಂದೆ ಅಂದು ಆಡಿದ್ದೆವು. ಆಗ ಒಲಿಂಪಿಕ್ಸ್‌. ಈಗ ವಿಶ್ವ ಚಾಂಪಿಯನ್‌ಷಿಪ್‌’ ಎಂದು ಪಂದ್ಯದ ನಂತರ ಚಿರಾಗ್ ಹೇಳಿದರು.

‘ಅವರೆದುರು ಆಡುವುದೇ ಖುಷಿ. ನಾವು ಕಠಿಣ ಹೋರಾಟಗಳಲ್ಲಿ ತೊಡಗಿದ್ದೇವೆ. ಅದೂ ದೊಡ್ಡ ವೇದಿಕೆಗಳಲ್ಲಿ. ಇಂದು ಗೆದ್ದಿದ್ದರಿಂತ ಸಂತಸವಾಗಿದೆ’ ಎಂದರು.

ಇದು ಸಾತ್ವಿಕ್‌–ಚಿರಾಗ್ ಜೋಡಿಗೆ ಎರಡನೇ ಪದಕವಾಗಲಿದೆ. 2022ರಲ್ಲಿ ಈ ಜೋಡಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. 2011 ರಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಪದಕ ಗೆದ್ದ ನಂತರ ಭಾರತ ಪ್ರತಿಯೊಂದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುತ್ತಾ ಬಂದಿದೆ.

ಏಷ್ಯನ್ ಗೇಮ್ಸ್‌ ಚಾಂಪಿಯನ್ನರು ಸೆಮಿಫೈನಲ್ ಪಂದ್ಯದಲ್ಲಿ 11ನೇ ಶ್ರೇಯಾಂಕ ಪಡೆದಿರುವ ಚೀನಾದ ಚೆನ್‌ ಬೊ ಯಂಗ್‌– ಲಿಯು ಯಿ ಜೋಡಿಯನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.