
ಸೀಮಾ ಪೂನಿಯಾ
ನವದೆಹಲಿ: ಏಷ್ಯನ್ ಕ್ರೀಡೆಗಳ ಡಿಸ್ಕಸ್ ಥ್ರೊ ಸ್ಪರ್ಧೆಯ ಮಾಜಿ ಸ್ವರ್ಣ ವಿಜೇತೆ ಸೀಮಾ ಪೂನಿಯಾ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಕಾರಣ ಅವರಿಗೆ 16 ತಿಂಗಳ ನಿಷೇಧ ವಿಧಿಸಲಾಗಿದೆ.
ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ (ನಾಡಾ)ದ ಪರಿಷ್ಕೃತ ಪಟ್ಟಿಯ ಪ್ರಕಾರ 42 ವರ್ಷ ವಯಸ್ಸಿನ ಪೂನಿಯಾ ಅವರ ಮೇಲೆ ಹೇರಿರುವ ನಿಷೇಧ ನವೆಂಬರ್ 10ರಿಂದ ಜಾರಿಯಾಗಿದೆ.
ಈ ಹಿಂದೆ ಎರಡು ಬಾರಿ ಅವರು ಮದ್ದು ಸೇವನೆ ನಿಯಮಗಳನ್ನು ಉಲ್ಲಂಘಿಸಿದ್ದರು. ಇದರಲ್ಲಿ ಒಂದು ಉಲ್ಲಂಘನೆ ಜೂನಿಯರ್ ಹಂತದಲ್ಲಿ ನಡೆದಿತ್ತು.
2023ರ ಹಾಂಗ್‌ಝೌ ಏಷ್ಯನ್ ಕ್ರೀಡೆಗಳು ಅವರ ಕೊನೆಯ ಪ್ರಮುಖ ಕೂಟವಾಗಿದ್ದು, ಇದರಲ್ಲಿ ಅವರು ಕಂಚಿನ ಪದಕ ಗಳಿಸಿದ್ದರು. ಅವರು ಏಷ್ಯನ್ ಗೇಮ್ಸ್‌ನ ಏಕೈಕ ಚಿನ್ನವನ್ನು ಇಂಚಿಯೊನ್‌ನಲ್ಲಿ (2014) ಪಡೆದಿದ್ದರು. ಅವರು ನಾಲ್ಕು ಬಾರಿಯ ಕಾಮನ್ವೆಲ್ತ್ ಪದಕ ವಿಜೇತೆ ಸಹ. ನಾಲ್ಕು ಪದಕಗಳಲ್ಲಿ ಮೂರು ಬೆಳ್ಳೀ ಸೇರಿವೆ.
ಮಧ್ಯಮ ದೂರದ ಓಟಗಾರ್ತಿ ಪೂಜಾ ಯಾದವ್ (4 ವರ್ಷ ನಿಷೇಧ), ಶಾಟ್‌ಪಟ್ ಸ್ಪರ್ಧಿ ಮಂಜೀತ್ ಕುಮಾರ್ (6 ವರ್ಷ), ಮಧ್ಯಮ ದೂರದ ಓಟಗಾರ ನಿಕೇಶ್ ಧನರಾಜ್ ರಾಥೋಡ್ (4 ವರ್ಷ) ಅವರು ಡೋಪಿಂಗ್ ಪರೀಕ್ಷೆಯಲ್ಲಿ ಸಿಲುಕಿ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.