ಹಾಕಿ
ಚೆನ್ನೈ: ಸಾಂಘಿಕ ಆಟವಾಡಿದ ಪಂಜಾಬ್ ತಂಡವು ಸೋಮವಾರ ನಡೆದ 13ನೇ ಹಾಕಿ ಇಂಡಿಯಾ ಸೀನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ 5–1ರಿಂದ ಕರ್ನಾಟಕ ತಂಡವನ್ನು ಮಣಿಸಿತು.
ರಾಷ್ಟ್ರೀಯ ತಂಡದ ನಾಯಕರೂ ಆಗಿರುವ ಹರ್ಮನ್‌ಪ್ರೀತ್ ಸಿಂಗ್ (39, 44ನೇ ನಿ) ಪಂಜಾಬ್ ತಂಡದ ಪರ ಎರಡು ಗೋಲು ಗಳಿಸಿ ಮಿಂಚಿದರೆ, ಶಂಶೇರ್ ಸಿಂಗ್ (4ನೇ), ಸುಖಜೀತ್ ಸಿಂಗ್ (13ನೇ) ಮತ್ತು ಆಕಾಶದೀಪ್ ಸಿಂಗ್ (45ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದರು. ಕರ್ನಾಟಕದ ಪರ ಏಕೈಕ ಗೋಲನ್ನು ಬಿ. ಅಭರಣ ಸುದೇವ್ (18ನೇ) ತಂದಿತ್ತರು.
ಮತ್ತೊಂದು ಸೆಮಿಫೈನಲ್‌ನಲ್ಲಿ ಆತಿಥೇಯ ತಮಿಳುನಾಡು ತಂಡವನ್ನು ಶೂಟೌಟ್‌ನಲ್ಲಿ 4-2ರಿಂದ ಹಾಲಿ ಚಾಂಪಿಯನ್ ಹರಿಯಾಣ ಸೋಲಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತು. 60 ನಿಮಿಷಗಳ ಪಂದ್ಯದಲ್ಲಿ ಹರಿಯಾಣ ಮತ್ತು ತಮಿಳುನಾಡು 1–1 ಗೋಲುಗಳ ಸಮಬಲ ಸಾಧಿಸಿತ್ತು.
ಭಾರತ ತಂಡದ ಫಾರ್ವರ್ಡ್ ಆಟಗಾರ ಅಭಿಷೇಕ್ 41ನೇ ನಿಮಿಷದಲ್ಲಿ ಹರಿಯಾಣಕ್ಕೆ ಮುನ್ನಡೆ ನೀಡಿದರು. ಆದರೆ, ಆತಿಥೇಯ ತಂಡದ ಬಿ.ಪಿ. ಸೋಮಣ್ಣ ಚೆಂಡನ್ನು ಗುರಿ ಸೇರಿಸಿ ಗೋಲನ್ನು ಸಮಬಲಗೊಳಿಸಿದರು. ಪ್ರಶಸ್ತಿಗೆ ಪಂಜಾಬ್ ಮತ್ತು ಹರಿಯಾಣ ತಂಡಗಳು ಸೆಣಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.