
ಬೆಂಗಳೂರು: ಕರ್ನಾಟಕದ ಪುರುಷರ ಮತ್ತು ಮಹಿಳೆಯರ ತಂಡಗಳು ಚೆನ್ನೈನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ 75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದವು.
ರಾಜ್ಯದ ಪುರುಷರ ತಂಡವು ಎ ಗುಂಪಿನ ಪಂದ್ಯದಲ್ಲಿ 104–69ರಿಂದ ಗುಜರಾತ್ ತಂಡವನ್ನು ಸುಲಭವಾಗಿ ಮಣಿಸಿತು. ಅನಿಲ್ ಕುಮಾರ್ ಬಿ.ಕೆ. 22, ಅರವಿಂದ್ ಆರುಮುಗಂ 15, ಆರನ್ ಮಾಂತೆರೊ 14 ಅಂಕಗಳೊಂದಿಗೆ ಕರ್ನಾಟಕದ ಗೆಲುವಿನಲ್ಲಿ ಮಿಂಚಿದರು. ಗುಜರಾತ್ ಪರ ಮಿರಾಂತ್ ಇಟಾಲಿಯಾ ಮತ್ತು ಜಿಗ್ರಾಜ್ ಸಿನ್ಹಾ ಗೋಹಿಲ್ ತಲಾ 17 ಪಾಯಿಂಟ್ಸ್ ಕಲೆಹಾಕಿದರು.
ಕರ್ನಾಟಕದ ಮಹಿಳಾ ತಂಡವು ಎ ಗುಂಪಿನ ಪಂದ್ಯದಲ್ಲಿ 91–71ರಿಂದ ಮಹಾರಾಷ್ಟ್ರ ವಿರುದ್ಧ ಗೆಲುವು ಸಾಧಿಸಿತು. ರಾಜ್ಯ ತಂಡದ ಶೃತಿ ಅರವಿಂದ್ 24, ಮಹೇಕ್ ಶರ್ಮಾ 21, ಸೋಬಾನ ಎಸ್ 16, ಬಾಂಧವ್ಯ ಎಂ. 14 ಅಂಕ ಗಳಿಸಿದರು. ಮಹಾರಾಷ್ಟ್ರ ಪರ ಸಿಯಾ ದಿಯೋಧರ್ 21 ಅಂಕ ತಂದಿತ್ತರು.
ಮಹಿಳೆಯರ ಇತರ ಪಂದ್ಯಗಳಲ್ಲಿ ಆತಿಥೇಯ ತಮಿಳುನಾಡು 72–65ರಿಂದ ಮಧ್ಯಪ್ರದೇಶ ವಿರುದ್ಧ; ಹಾಲಿ ಚಾಂಪಿಯನ್ ರೈಲ್ವೇಸ್ 101–51ರಿಂದ ದೆಹಲಿ ವಿರುದ್ಧ; ಕೇರಳ 91–22ರಿಂದ ಗುಜರಾತ್ ವಿರುದ್ಧ; ಉತ್ತರ ಪ್ರದೇಶ 42–41ರಿಂದ ತೆಲಂಗಾಣ ವಿರುದ್ಧ; ಪಂಜಾಬ್ 72–28ರಿಂದ ಉತ್ತರಾಖಂಡ ವಿರುದ್ಧ ಗೆಲುವು ದಾಖಲಿಸಿದವು.
ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಕೇರಳ 80–79ರಿಂದ ಪಶ್ಚಿಮ ಬಂಗಾಳ ಎದುರು; ತೆಲಂಗಾಣ 73–72ರಿಂದ ಹಿಮಾಚಲ ಪ್ರದೇಶ ಎದುರು; ಮಹಾರಾಷ್ಟ್ರ 69–67ರಿಂದ ಗೋವಾ ಎದುರು; ಜಾರ್ಖಂಡ್ 71–6ರಿಂದ ಜಮ್ಮು ಮತ್ತು ಕಾಶ್ಮೀರ ಎದುರು; ಅಸ್ಸಾಂ 68–60ರಿಂದ ಮಿಜೋರಾಂ ಎದುರು; ಅಸ್ಸಾಂ 50–41ರಿಂದ ನಾಗಾಲ್ಯಾಂಡ್ ಎದುರು; ಉತ್ತರ ಪ್ರದೇಶ 112–100ರಿಂದ ಪಂಜಾಬ್ ಎದುರು ಜಯ ಗಳಿಸಿದವು.
ಸೋಮವಾರ ಕರ್ನಾಟಕದ ಪುರುಷರ ತಂಡವು ತನ್ನ ಎರಡನೇ ಪಂದ್ಯದಲ್ಲಿ ಸರ್ವಿಸಸ್ ತಂಡವನ್ನು; ಮಹಿಳೆಯರ ತಂಡವು ರೈಲ್ವೇಸ್ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.