ADVERTISEMENT

ಒಲಿಂಪಿಕ್ಸ್‌ | ಟೇಬಲ್‌ ಟೆನಿಸ್‌: ಮಣಿಕಾ, ಶ್ರೀಜಾ ಶುಭಾರಂಭ

ಪುರುಷರ ಸಿಂಗಲ್ಸ್‌ನಲ್ಲಿ ಶರತ್‌ಗೆ ಆಘಾತ

ಪಿಟಿಐ
Published 28 ಜುಲೈ 2024, 15:34 IST
Last Updated 28 ಜುಲೈ 2024, 15:34 IST
ಪಂದ್ಯವನ್ನು ಗೆದ್ದ ಮಣಿಕಾ ಬಾತ್ರಾ ಅವರನ್ನು ಭಾರತ ತಂಡದ ಕೋಚ್ ಮಾಸ್ಸಿಮೊ ಕಾನ್ಸ್‌ಟೆಂಟಿನಿ ಅಭಿನಂದಿಸಿದರು
–ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್‌
ಪಂದ್ಯವನ್ನು ಗೆದ್ದ ಮಣಿಕಾ ಬಾತ್ರಾ ಅವರನ್ನು ಭಾರತ ತಂಡದ ಕೋಚ್ ಮಾಸ್ಸಿಮೊ ಕಾನ್ಸ್‌ಟೆಂಟಿನಿ ಅಭಿನಂದಿಸಿದರು –ಪ್ರಜಾವಾಣಿ ಚಿತ್ರ/ ಕೆ.ಎನ್‌. ಶಾಂತಕುಮಾರ್‌   

ಪ್ಯಾರಿಸ್‌: ಭಾರತದ ಅನುಭವಿ ಟೇಬಲ್‌ ಟೆನಿಸ್‌ ಆಟಗಾರ ಅಚಂತ ಶರತ್‌ ಕಮಲ್‌ ಅವರು ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ಆದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಶುಭಾರಂಭ ಮಾಡಿದರು.

ಐದನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ 41 ವರ್ಷದ ಶರತ್‌ ಅವರು 64ರ ಘಟ್ಟದ ಪಂದ್ಯದಲ್ಲಿ 12-10, 9-11, 6-11, 7-11, 11-8, 10-12ರಿಂದ ಸ್ಲೊವೇನಿಯಾದ ಡೆನಿ ಕೊಜುಲ್ ಅವರಿಗೆ ಮಣಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 40ನೇ ಸ್ಥಾನದಲ್ಲಿರುವ, ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಶರತ್‌ ಅವರು 126ನೇ ಕ್ರಮಾಂಕದಲ್ಲಿರುವ ಎದುರಾಳಿಯ ವಿರುದ್ಧ ಉತ್ತಮ ಆರಂಭ ಪಡೆದಿದ್ದರು. ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿದ್ದ ಅವರು, ನಂತರ ಹಿಡಿತ ಕಳೆದುಕೊಂಡರು. ಐದನೇ ಗೇಮ್‌ನಲ್ಲಿ  ಭಾರತದ ಆಟಗಾರ ಮತ್ತೆ ಪ್ರತಿರೋಧ ತೋರಿದರು. ಆದರೆ, ಆರನೇ ಗೇಮನ್ನು ಕೈವಶ ಮಾಡಿಕೊಂಡ ಕೊಜುಲ್‌ ಮುಂದಿನ ಸುತ್ತಿಗೆ ಲಗ್ಗೆಯಿಟ್ಟರು.

ADVERTISEMENT

29 ವರ್ಷದ ಮಣಿಕಾ ಅವರು ಆರಂಭದ ಸುತ್ತಿನ ಪಂದ್ಯದಲ್ಲಿ 11-8, 12-10, 11-9, 9-11, 11-5 ರಿಂದ ಬ್ರಿಟನ್‌ನ ಅನ್ನಾ ಹರ್ಸೆ ಅವರನ್ನು ಹಿಮ್ಮೆಟ್ಟಿಸಿದರು.

ವಿಶ್ವ ಕ್ರಮಾಂಕದಲ್ಲಿ 28ನೇ ಸ್ಥಾನದಲ್ಲಿರುವ ಮಣಿಕಾ ಅವರು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಾಡಿದ್ದ ತಮ್ಮ ಸಾಧನೆಯನ್ನು ಸರಿಗಟ್ಟಿದರು. ಅಲ್ಲಿ ಅವರು ಸಿಂಗಲ್ಸ್‌ನಲ್ಲಿ 32ರ ಘಟ್ಟಕ್ಕೆ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

103ನೇ ಕ್ರಮಾಂಕದ ಹರ್ಸೆ ವಿರುದ್ಧ ಮಣಿಕಾ ಆರಂಭದಿಂದಲೇ ಪ್ರಾಬಲ್ಯ ಮೆರೆದರು. ಮೊದಲ ಮೂರು ಗೇಮ್‌ಗಳಲ್ಲಿ ಮೇಲುಗೈ ಸಾಧಿಸಿದ ಭಾರತ ಆಟಗಾರ್ತಿ ಗೆಲುವಿಗೆ ಹತ್ತಿರವಾದರು. ಆದರೆ, ನಾಲ್ಕನೇ ಗೇಮ್‌ನಲ್ಲಿ ಹಸ್ಸಿ ತಿರುಗೇಟು ನೀಡಿದರು. ಐದನೇ ಗೇಮನ್ನು ನಿರಾಯಾಸವಾಗಿ ಗೆದ್ದ ಮಣಿಕಾ ಮುಂದಿನ ಸುತ್ತಿಗೆ ಹೆಜ್ಜೆಯಿಟ್ಟರು.

ಮಣಿಕಾ ಅವರು ಮಂಗಳವಾರ ನಡೆಯುವ ಮುಂದಿನ ಸುತ್ತಿನ ಪಂದ್ಯದಲ್ಲಿ 12ನೇ ಶ್ರೇಯಾಂಕದ ಪ್ರಿತಿಕಾ ಪವಾಡೆ (ಫ್ರಾನ್ಸ್‌) ಅವರನ್ನು ಎದುರಿಸಲಿದ್ದಾರೆ. ಪ್ರಿತಿಕಾ ತಾಯಿ ಪುದುಚೇರಿಯವರು. ಅವರು ಭಾರತದಲ್ಲೂ ಸಾಕಷ್ಟು ಸಮಯ ಆಡಿದ್ದಾರೆ.

ಇದಕ್ಕೂ ಮೊದಲು ಶ್ರೀಜಾ 11-4, 11-9, 11-7, 11-8 ರಿಂದ ಸ್ವೀಡನ್‌ನ ಕ್ರಿಸ್ಟಿನಾ ಕಾಲ್‌ಬರ್ಗ್ ಅವರನ್ನು ಸುಲಭವಾಗಿ ಮಣಿಸಿ 32ರ ಘಟ್ಟವನ್ನು ಪ್ರವೇಶಿಸಿದರು.

ಕೆಲ ವಾರಗಳ ಹಿಂದೆ ಡಬ್ಲ್ಯುಟಿಟಿ ಕಂಟೆಂಡರ್‌ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿರುವ 25 ವರ್ಷದ ಶ್ರೀಜಾ ಎದುರಾಳಿಗೆ ಒಂದೂ ಸೆಟ್‌ ಬಿಟ್ಟುಕೊಡದೆ ಮುನ್ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.