ADVERTISEMENT

ದಿವ್ಯಾಂಶ್‌ಗೆ ಟೋಕಿಯೊ ಟಿಕೆಟ್‌

ವಿಶ್ವಕಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಭಾರತದ ಶೂಟರ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 3:33 IST
Last Updated 27 ಏಪ್ರಿಲ್ 2019, 3:33 IST
ದಿವ್ಯಾಂಶ್‌ ಸಿಂಗ್‌ ಪನ್ವರ್‌
ದಿವ್ಯಾಂಶ್‌ ಸಿಂಗ್‌ ಪನ್ವರ್‌   

ಬೀಜಿಂಗ್‌ (ಪಿಟಿಐ): ಭಾರತದ ದಿವ್ಯಾಂಶ್‌ ಸಿಂಗ್‌ ಪನ್ವರ್‌ ಅವರು ಮುಂದಿನ ವರ್ಷ ಜಪಾನ್‌ನ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಬೆಳ್ಳಿಯ ಪದಕ ಜಯಿಸಿ ಈ ಸಾಧನೆ ಮಾಡಿದ್ದಾರೆ.

ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದಲ್ಲಿ ಕಣದಲ್ಲಿದ್ದ 17 ವರ್ಷ ವಯಸ್ಸಿನ ದಿವ್ಯಾಂಶ್‌, ಕೇವಲ 0.4 ಪಾಯಿಂಟ್‌ನಿಂದ ಚಿನ್ನದ ಪದಕ ವಂಚಿತರಾದರು.

ADVERTISEMENT

24 ಶಾಟ್‌ಗಳ ಫೈನಲ್‌ನಲ್ಲಿ ರಾಜಸ್ಥಾನದ ದಿವ್ಯಾಂಶ್‌ ಮತ್ತು ಚೀನಾದ ಜಿಚೆಂಗ್‌ ಹುಯಿ ನಡುವೆ ಜಿದ್ದಾಜಿದ್ದಿನ ‍ಪೈಪೋಟಿ ಏರ್ಪ‍ಟ್ಟಿತ್ತು. ಹನ್ನೊಂದನೇ ತರಗತಿಯ ವಿದ್ಯಾರ್ಥಿ ದಿವ್ಯಾಂಶ್‌ ಅಂತಿಮವಾಗಿ 249.0 ಪಾಯಿಂಟ್ಸ್‌ ಕಲೆಹಾಕಿದರು. ಜಿಚೆಂಗ್‌ 249.4 ಪಾಯಿಂಟ್ಸ್‌ ಸಂಗ್ರಹಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಈ ವಿಭಾಗದ ಕಂಚಿನ ಪದಕ ರಷ್ಯಾದ ಗ್ರಿಗೋರಿ ಶಮಕೋವ್ ಅವರ ಪಾಲಾಯಿತು. ಗ್ರಿಗೋರಿ ಒಟ್ಟು 227.5 ಪಾಯಿಂಟ್ಸ್‌ ಗಳಿಸಿದರು.

ಈ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಇತರ ಸ್ಪರ್ಧಿಗಳಾದ ರವಿಕುಮಾರ್‌ (624.1 ಪಾ.) ಮತ್ತು ದೀಪಕ್‌ ಕುಮಾರ್‌ (622.6 ಪಾ.) ಫೈನಲ್‌ಗೆ ಅರ್ಹತೆ ಗಳಿಸಲು ವಿಫಲರಾದರು. ಇವರು ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 44 ಮತ್ತು 57ನೇ ಸ್ಥಾನ ಪಡೆದರು.

ದಿವ್ಯಾಂಶ್‌ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ನಾಲ್ಕನೇ ಶೂಟರ್‌ ಆಗಿದ್ದಾರೆ. ಈ ಮೊದಲು ಅಂಜುಮ್‌ ಮೌಡ್ಗಿಲ್‌, ಅಪೂರ್ವಿ ಚಾಂಡೇಲಾ (ಇಬ್ಬರೂ ಮಹಿಳೆಯರ 10 ಮೀ.ಏರ್‌ ರೈಫಲ್‌) ಹಾಗೂ ಸೌರಭ್‌ ಚೌಧರಿ (10 ಮೀ. ಏರ್‌ ಪಿಸ್ತೂಲ್‌) ಒಲಿಂಪಿಕ್ಸ್‌ಗೆ ರಹದಾರಿ ಪಡೆದಿದ್ದರು.

ಈ ಕೂಟದಲ್ಲಿ ದಿವ್ಯಾಂಶ್‌ ಗೆದ್ದ ಎರಡನೇ ಚಿನ್ನದ ಪದಕ ಇದಾಗಿದೆ. ಗುರುವಾರ ನಡೆದಿದ್ದ ಮಿಶ್ರ ತಂಡ ವಿಭಾಗದಲ್ಲಿ ಅಂಜುಮ್‌ ಮೌಡ್ಗಿಲ್‌ ಜೊತೆಗೂಡಿ ಸ್ಪರ್ಧಿಸಿದ್ದ ಅವರು ಫೈನಲ್‌ನಲ್ಲಿ ಚೀನಾದ ಲಿಯು ರುಕ್ಸುವನ್‌ ಮತ್ತು ಯಾಂಗ್‌ ಹಾವೊರನ್‌ ಅವರನ್ನು ಮಣಿಸಿದ್ದರು.

‘ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದು ಹೆಮ್ಮೆಯ ಸಂಗತಿ. ಇಲ್ಲಿ ಗೆದ್ದ ಪದಕ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಒಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ’ ಎಂದು ದಿವ್ಯಾಂಶ್‌ ಹೇಳಿದ್ದಾರೆ.

ಆದರ್ಶ್‌ಗೆ 10ನೇ ಸ್ಥಾನ: ಪುರುಷರ 25 ಮೀಟರ್ಸ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಆದರ್ಶ್‌ ಸಿಂಗ್‌ 10ನೇಯವರಾಗಿ ಸ್ಪರ್ಧೆ ಮುಗಿಸಿದರು.

ಅರ್ಹತಾ ಹಂತದಲ್ಲಿ ಆದರ್ಶ್‌ ಒಟ್ಟು 583 ಸ್ಕೋರ್‌ ಕಲೆಹಾಕಿದರು.

ಅನೀಶ್‌ ಭಾನವಾಲಾ 22ನೇ ಸ್ಥಾನ ಪಡೆದರು. ಅವರು 578 ಸ್ಕೋರ್‌ ಕಲೆಹಾಕಲಷ್ಟೇ ಶಕ್ತರಾದರು. ಅರ್ಪಿತ್‌ ಗೋಯಲ್‌ (575) 29ನೇ ಸ್ಥಾನಕ್ಕೆ ತೃಪ್ತರಾದರು.

ಚೀನಾದ ಲಿನ್‌ ಜುನ್‌ಮಿನ್‌ ಈ ವಿಭಾಗದ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಲಿನ್‌, ಫೈನಲ್‌ನಲ್ಲಿ 35 ಸ್ಕೋರ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.