ADVERTISEMENT

ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್‌: ರವಿಂದರ್‌ಗೆ ಚಿನ್ನ, ಇಳವೆನಿಲ್‌ಗೆ ಕಂಚು

ಪಿಟಿಐ
Published 8 ನವೆಂಬರ್ 2025, 13:53 IST
Last Updated 8 ನವೆಂಬರ್ 2025, 13:53 IST
   

ಕೈರೊ: ಸೇನೆಯ ಅನುಭವಿ ಶೂಟರ್ ರವಿಂದರ್ ಸಿಂಗ್ ಅವರು ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಪುರುಷರ 50 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು.

ಆದರೆ ಮಹಿಳೆಯರ ವಿಭಾಗದಲ್ಲಿ ಎರಡು ಬಾರಿಯ ಒಲಿಂಪಿಯನ್ ಚಾಂಪಿಯನ್ ಇಳವನಿಲ್ ವಳರಿವನ್‌ ಅವರು ತೀವ್ರ ಹಣಾಹಣಿಯ 10 ಮೀ. ಏರ್‌ ರೈಫೆಲ್‌ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.

26 ವರ್ಷ ಪ್ರಾಯ ವಳರಿವನ್ ಫೈನಲ್‌ ಒಂದು ಹಂತದಲ್ಲಿ ಲೀಡ್ ಪಡೆದಿದ್ದರು. ಆದರೆ 19ನೇ ಶಾಟ್‌ನಲ್ಲಿ 10.0 ಸ್ಕೋರ್‌ನೊಡನೆ ಮೂರನೇ ಸ್ಥಾನಕ್ಕೆ ಸರಿದರು. ನಂತರ ಅವರು ಮೇಲಿನ ಸ್ಥಾನಕ್ಕೆ ಏರಲಾಗಲಿಲ್ಲ. ಅಂತಿಮವಾಗಿ 232.0 ಸ್ಕೋರ್ ಗಳಿಸಿದರು. 

ADVERTISEMENT

ದಕ್ಷಿಣ ಕೊರಿಯಾದ ಬಾನ್ ಹ್ಯೊಜಿನ್ (255.0) ಚಿನ್ನ ಗೆದ್ದರೆ, ಚೀನಾದ ವಾಂಗ್‌ ಜಿಫೀ (254) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 19ನೇ ಶಾಟ್‌ವರೆಗೆ ಚೀನಾ ಸ್ಪರ್ಧಿಯು ವಳರಿವನ್ ಅವರಿಗಿಂತ ಹಿಂದೆಯಿದ್ದರು.

ಇಳವೆನಿಲ್‌, ಮೇಘನಾ ಸಜ್ಜನರ ಮತ್ತು ಶ್ರೇಯಾ ಅಗರವಾಲ್ ಅವರನ್ನೊಳಗೊಂಡ ಭಾರತ ತಂಡ (1893.3) ತಂಡ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯಿತು. ಚೀನಾ (1901.7) ಮತ್ತು ದಕ್ಷಿಣ ಕೊರಿಯಾ (1899.9) ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಪಡೆದವು.


ನಾಯಕ್ ಸುಬೇದಾರ್ ಆಗಿರುವ 29 ವರ್ಷ ವಯಸ್ಸಿನ ರವಿಂದರ್ ಸಿಂಗ್ ತಮ್ಮ ವೃತ್ತಿ ಜೀವನದ ಅತಿ ದೊಡ್ಡ ಯಶಸ್ಸನ್ನು ಸವಿದರು. ಜಮ್ಮು ಮತ್ತು ಕಾಶ್ಮೀರದ ಈ ಶೂಟರ್ ಈ ಮೊದಲು ಬಾಕುವಿನಲ್ಲಿ (ಅಜರ್‌ಬೈಜಾನ್‌) ನಡೆದಿದ್ದ ವಿಶ್ವ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದು ಉತ್ತಮ ಸಾಧನೆಯೆನಿಸಿತ್ತು.

ಅವರು 569 ಪಾಯಿಂಟ್ ಸ್ಕೋರ್ ಮಾಡಿದರೆ, ದಕ್ಷಿಣ ಕೊರಿಯಾದ ಕಿಮ್‌ ಚಿಯಾಂಗ್‌ಯಾಂಗ್ (556)  ಅವರು ಬೆಳ್ಳಿ ಮತ್ತು ತಟಸ್ಥ ರಾಷ್ಟ್ರದ ಆ್ಯಂಟನ್‌ ಅರಿಸ್ಟರ್ಕೊವ್‌ (555) ಕಂಚಿನ ಪ‍ದಕ ಗೆದ್ದುಕೊಂಡರು.

ರವಿಂದರ್‌ (569), ಕಮಲಜೀತ್‌ (540) ಮತ್ತು ಯೋಗೇಶ್ ಕುಮಾರ್ (537) ಅವರನ್ನು ಒಳಗೊಂಡ ತಂಡವು ಒಟ್ಟು 1646 ಅಂಕಗಳೊಡನೆ ಟೀಮ್‌ ವಿಭಾಗದಲ್ಲಿ ಬೆಳ್ಳಿ ಗೆದ್ದಿತು. ದಕ್ಷಿಣ ಕೊರಿಯಾ (1648) ತಂಡ ಚಿನ್ನ ಗೆದ್ದರೆ, ಉಕ್ರೇನ್ (1644) ಕಂಚಿನ ಪದಕ ಗಳಿಸಿತು. 11 ತಂಡಗಳು ಕಣದಲ್ಲಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.