ADVERTISEMENT

ಶೂಟಿಂಗ್‌: ಭಾರತಕ್ಕೆ ಅಗ್ರಸ್ಥಾನ

ಪಿಟಿಐ
Published 28 ಏಪ್ರಿಲ್ 2019, 15:38 IST
Last Updated 28 ಏಪ್ರಿಲ್ 2019, 15:38 IST
ಬಲ್ಗೇರಿಯಾದ ಮರಿಯಾ ಗ್ರೊಜ್‌ಡೆವಾ
ಬಲ್ಗೇರಿಯಾದ ಮರಿಯಾ ಗ್ರೊಜ್‌ಡೆವಾ   

ಬೀಜಿಂಗ್‌: ಭಾರತ ತಂಡವು ಭಾನುವಾರ ಮುಕ್ತಾಯವಾದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.

ತಂಡವು ಮೂರು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಜಯಿಸಿ ಈ ಸಾಧನೆ ಮಾಡಿದೆ. ಚೀನಾ ಎರಡನೇ ಸ್ಥಾನ ಗಳಿಸಿದೆ. ಈ ತಂಡವು ಎರಡು ಚಿನ್ನ ಸೇರಿ ಒಟ್ಟು ಐದು ಪದಕಗಳನ್ನು ಜಯಿಸಿದೆ.

ಭಾರತವು ಸತತ ಎರಡನೇ ಸಲ ವಿಶ್ವಕಪ್‌ನ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿದೆ. ನವದೆಹಲಿಯಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯಲ್ಲೂ ತಂಡ ಅಗ್ರಸ್ಥಾನ ಪಡೆದಿತ್ತು.

ADVERTISEMENT

ಈ ಬಾರಿ ಅಂಜುಮ್‌ ಮೋದ್ಗಿಲ್‌ ಮತ್ತು ದಿವ್ಯಾಂಶ್‌ ಸಿಂಗ್ ಪನ್ವರ್‌ (10 ಮೀ.ಏರ್‌ ರೈಫಲ್‌ ಮಿಶ್ರ ತಂಡ), ಮನು ಭಾಕರ್‌ ಮತ್ತು ಸೌರಭ್‌ ಚೌಧರಿ (10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ) ಹಾಗೂ ಅಭಿಷೇಕ್‌ ವರ್ಮಾ (10 ಮೀ. ಏರ್‌ ಪಿಸ್ತೂಲ್‌ ವೈಯಕ್ತಿಕ) ಚಿನ್ನದ ಪದಕ ಜಯಿಸಿದರೆ, ದಿವ್ಯಾಂಶ್‌ ಸಿಂಗ್‌ ಪನ್ವರ್‌ (10 ಮೀ. ಏರ್‌ ರೈಫಲ್ ವೈಯಕ್ತಿಕ) ಬೆಳ್ಳಿಯ ಪದಕ ಪಡೆದರು.

ಅಂತಿಮ ದಿನ ಭಾರತದ ಶೂಟರ್‌ಗಳು ಪದಕ ಗೆಲ್ಲಲಿಲ್ಲ. 25 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಕಣದಲ್ಲಿದ್ದ ಮನು ಭಾಕರ್‌, ರಾಹಿ ಸರ್ನೋಬತ್‌ ಮತ್ತು ಚಿಂಕಿ ಯಾದವ್‌ ಅವರು ಫೈನಲ್‌ ಪ್ರವೇಶಿಸಲು ವಿಫಲರಾದರು.

ಅರ್ಹತಾ ಸುತ್ತಿನಲ್ಲಿ 586 ಪಾಯಿಂಟ್ಸ್‌ ಗಳಿಸಿದ ಮನು 17ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದ ರಾಹಿ, 26ನೇ ಸ್ಥಾನ ಪಡೆದರು. ಅವರು 579 ಪಾಯಿಂಟ್ಸ್‌ ಕಲೆಹಾಕಿದರು. ಚಿಂಕಿ (570 ಪಾ.) 56ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಬಲ್ಗೇರಿಯಾದ ಮರಿಯಾ ಗ್ರೊಜ್‌ಡೆವಾ ಈ ವಿಭಾಗದ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಫೈನಲ್‌ನಲ್ಲಿ 46 ವರ್ಷ ವಯಸ್ಸಿನ ಮರಿಯಾ 36 ಪಾಯಿಂಟ್ಸ್‌ ಸಂಗ್ರಹಿಸಿದರು.

ಹಂಗರಿಯ ವೆರೋನಿಕಾ ಮೇಜರ್‌ ಮತ್ತು ಗ್ರೀಸ್‌ನ ಆ್ಯನಾ ಕೊರಾಕಾಕಿ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

50 ಮೀಟರ್ಸ್‌ ರೈಫಲ್‌ ತ್ರಿ ಪೊಸಿಷನ್‌ ವಿಭಾಗದಲ್ಲಿ ಕಣದಲ್ಲಿದ್ದ ಎನ್‌.ಗಾಯತ್ರಿ, ಸುನಿಧಿ ಚೌಹಾಣ್‌ ಮತ್ತು ಕಾಜಲ್‌ ಸೈನಿ ಅವರು ಅರ್ಹತಾ ಹಂತದಲ್ಲೇ ಹೋರಾಟ ಮುಗಿಸಿದರು.

ಗಾಯತ್ರಿ ಅವರು 1169 ಸ್ಕೋರ್‌ ಗಳಿಸಿ 19ನೇ ಸ್ಥಾನ ಪಡೆದರೆ, ಸುನಿಧಿ (1160) ಮತ್ತು ಕಾಜಲ್‌ (1142) ಅವರು ಕ್ರಮವಾಗಿ 42 ಮತ್ತು 60ನೇ ಸ್ಥಾನಗಳೊಂದಿಗೆ ಸ್ಪರ್ಧಿ ಮುಗಿಸಿದರು.

ಕ್ರೊವೇಷ್ಯಾದ ಸೆಜೆಜನಾ ಪೆಜಿಸಿಸ್‌ ಅವರು ಚಿನ್ನದ ಪದಕ ಗೆದ್ದರು. ಫೈನಲ್‌ನಲ್ಲಿ ಅವರು ಒಟ್ಟು 464 ಸ್ಕೋರ್‌ ಕಲೆಹಾಕಿದರು.

ದಕ್ಷಿಣ ಕೊರಿಯಾದ ಬೇ ಸಂಗ್‌ ಹೀ (459.5) ಮತ್ತು ನಾರ್ವೆಯ ಜೀನೆಟ್‌ ಹೆಗ್‌ (447.1) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.