ADVERTISEMENT

ವಿಶ್ವಕಪ್‌ ಶೂಟಿಂಗ್‌: ಚೊಚ್ಚಲ ಯತ್ನದಲ್ಲಿ ಬೆಳ್ಳಿ ಗೆದ್ದ ಐಶ್ವರಿ ಪ್ರಸಾದ್

ವಿಶ್ವಕಪ್‌ ಶೂಟಿಂಗ್‌ 50 ಮೀ. ರೈಫಲ್ 3 ಪೊಸಿಷನ್‌

ಪಿಟಿಐ
Published 7 ಡಿಸೆಂಬರ್ 2025, 16:11 IST
Last Updated 7 ಡಿಸೆಂಬರ್ 2025, 16:11 IST
ಶೂಟಿಂಗ್‌ 
ಶೂಟಿಂಗ್‌    

ದೋಹಾ: ಭಾರತದ 50 ಮೀ. ರೈಫಲ್ 3 ಪೊಸಿಷನ್ಸ್ ಚಾಂಪಿಯನ್ ಐಶ್ವರಿ ಪ್ರಸಾದ್ ಸಿಂಗ್‌ ತೋಮಾರ್ ಅವರು ತಮ್ಮ ಮೊದಲ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಫೈನಲ್‌ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು. ಆ ಮೂಲಕ ವಿಶ್ವ ಮತ್ತು ಏಷ್ಯಾ ಮಟ್ಟದ ಎಲ್ಲಾ ಸ್ಪರ್ಧೆಗಳಲ್ಲಿ ಅವರು ಪದಕ ಗೆದ್ದಂತಾಯಿತು.

ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಝೆಕ್‌ ಗಣರಾಜ್ಯದ ಜಿರಿ ಪ್ರಿವ್ರಾಟ್‌ಸ್ಕಿ 414.2 ಪಾಯಿಂಟ್‌ ಸ್ಕೋರ್ ಮಾಡಿ ಚಿನ್ನ ಗೆದ್ದುಕೊಂಡರು. ಐಶ್ವರಿ ಅವರಿಗಿಂತ ಕೇವಲ 09.9 ಪಾಯಿಂಟ್‌ ಅಂತರದಿಂದ ಹಿಂದೆಬಿದ್ದು ಎರಡನೇ ಸ್ಥಾನ ಪಡೆದರು. ಒಲಿಂಪಿಕ್ ಚಾಂಪಿಯನ್, ಚೀನಾದ ಲಿಯು ಯುಕುನ್ ಬೆಳ್ಳಿ ಪದಕ ಗೆದ್ದುಕೊಂಡರು.

ಎರಡು ಬಾರಿಯ ಒಲಿಂಪಿಯನ್ ಆಗಿರುವ ಐಶ್ವರಿ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದಾರೆ. ಹಾಲಿ ಏಷ್ಯನ್ ಚಾಂಪಿಯನ್ ಆಗಿರುವ ಅವರು ಅಕ್ಟೋಬರ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಲ ಗೆದ್ದುಕೊಂಡಿದ್ದರು.

ADVERTISEMENT

ಅರ್ಹತಾ ಸುತ್ತಿನಲ್ಲಿ ಐಶ್ವರಿ ಅವರು 595 ಪಾಯಿಂಟ್‌ ಸ್ಕೋರ್ ಮಾಡಿ ಎರಡನೇ ಸ್ಥಾನ ಗಳಿಸಿದ್ದರು. ಈ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಚೀನಾದ ಟಿಯಾನ್ ಜಿಯಾಮಿಂಗ್ ಅವರು ವಿಶ್ವದಾಖಲೆಯ 598 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದಿದ್ದರು. ಅಂತಿಮ ಎಂಟರಲ್ಲಿ ಚೀನಾದ ಮೂವರ ಜೊತೆ, ವರ್ಷದ ಅಥ್ಲೀಟ್‌ ಜಾನ್–ಹೆರ್ಮನ್ ಹೆಗ್‌ (ನಾರ್ವೆ) ಮತ್ತು ಇಸ್ತವಾನ್ ಪೆನಿ (ಹಂಗೆರಿ) ಅವರೂ ಸ್ಥಾನ ಪಡೆದಿದ್ದರು.

ಮಂಡಿಯೂರಿ ಶೂಟ್‌ ಮಾಡುವ ಸ್ಪರ್ಧೆಯ 10 ಶಾಟ್‌ಗಳ ನಂತರ ಐಶ್ವರಿ 102.8 ಸ್ಕೋರ್‌ನೊಡನೆ ನಾಲ್ಕನೇ ಸ್ಥಾನದಲ್ಲಿದ್ದರು. ಪ್ರೋನ್‌ (ಅಂಗಾತ ಸ್ಥಿತಿಯಲ್ಲಿದ್ದು ಶೂಟ್‌ ಮಾಡುವ) ಪೊಸಿಷನ್‌ ನಂತರ ಅವರು ಎರಡನೇ ಸ್ಥಾನಕ್ಕೇರಿದರು. ಜಿರಿ ಪ್ರಿವ್ರಾಟ್‌ಸ್ಕಿ ಆಗ ಐಶ್ವರಿ ಅವರಿಗಿಂತ 3.3 ಪಾಯಿಂಟ್‌ ಮುಂದಿದ್ದರು. ಲಿಯು ಮೂರನೇ ಸ್ಥಾನದಲ್ಲಿದ್ದರು. 

ಈ ಬೆಳ್ಳಿ, ಭಾರತಕ್ಕೆ ದೋಹಾ ಕೂಟದಲ್ಲಿ ಒಲಿದ ನಾಲ್ಕನೇ ಪದಕವಾಗಿದೆ.

ಮಹಿಳೆಯರ ರೈಫಲ್ 3 ಪೊಸಿಷನ್‌ನಲ್ಲಿ ಸಿಫ್ತ್‌ ಕೌರ್ ಸಮ್ರಾ, ಮಹಿಳೆಯರ 25 ಮೀ.ಪಿಸ್ತೂಲ್ ಫೈನಲ್‌ನಲ್ಲಿ ಮನು ಭಾಕರ್ ಅವರು ಅವರು ಅರ್ಹತಾ ಸುತ್ತಿಗಿಂತ ಮೇಲೇರಲು ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಸಿಫ್ತ್‌ 584 ಸ್ಕೋರ್‌ನೊಡನೆ ಹತ್ತನೇ ಸ್ಥಾನ ಪಡೆದರೆ, ಮನು 581 ಸ್ಕೋರ್‌ನೊಡನೆ 9ನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.