ADVERTISEMENT

ಕೃಷಿ ಕಾಯಕದಿಂದ ಕಂಬಳ ‘ಕರೆ’ಗೆ

ಮರೋಡಿಯ ಶ್ರೀಧರ ಕುಲಾಲ್‌ಗೆ ‘ಕ್ರೀಡಾ ರತ್ನ’ ಪ್ರಶಸ್ತಿ; ಮಂಗಳ ಫ್ರೆಂಡ್ಸ್ ಸರ್ಕಲ್‌ಗೂ ಗೌರವ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 16:26 IST
Last Updated 5 ಡಿಸೆಂಬರ್ 2022, 16:26 IST
ಮರೋಡಿಯ ಶ್ರೀಧರ ಕುಲಾಲ್‌ ಅವರು ಕೋಣಗಳನ್ನು ಓಡಿಸಿದ ಪರಿ
ಮರೋಡಿಯ ಶ್ರೀಧರ ಕುಲಾಲ್‌ ಅವರು ಕೋಣಗಳನ್ನು ಓಡಿಸಿದ ಪರಿ   

ಮಂಗಳೂರು: ಕಕ್ಯಪದವು ಮತ್ತು ವೇಣೂರಿನಲ್ಲಿ ನಡೆದ ಈ ಋತುವಿನ ಮೊದಲ ಎರಡು ಕಂಬಳಗಳಲ್ಲೂ ಬಹುಮಾನ ಗೆದ್ದಿರುವ ಬೆಳ್ತಂಗಡಿ ತಾಲ್ಲೂಕು ಮರೋಡಿಯ ಶ್ರೀಧರ ಕುಲಾಲ್‌ ಅವರ ಮುಡಿಗೆ ಕರ್ನಾಟಕದ ‘ಕ್ರೀಡಾ ರತ್ನ’ ಪ್ರಶಸ್ತಿಯ ಗರಿ.

ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಕಂಬಳದಲ್ಲಿ ಕೋಣಗಳನ್ನು ಓಡಿಸುತ್ತ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದ ಶ್ರೀಧರ ಅವರು ಕಕ್ಯಪದವು ಕಂಬಳದಲ್ಲಿ ಬೆಳುವಾಯಿ ಪುತ್ತಿಗೆ ಪೆರೋಡಿಗುತ್ತು ತಾನಾಜಿ ಬಿ.ಶೆಟ್ಟಿ ಅವರ ಕೋಣಗಳನ್ನು ಓಡಿಸಿ ಹಗ್ಗ ಕಿರಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು. ಬೆಳ್ತಂಗಡಿಯ ವೇಣೂರಿನಲ್ಲಿ ನಡೆದ ಸೂರ್ಯ–ಚಂದ್ರ ಕಂಬಳದ ನೇಗಿಲು ಕಿರಿಯ ವಿಭಾಗದಲ್ಲಿ ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ ಅವರ ಕೋಣಗಳನ್ನು ಓಡಿ ದ್ವಿತೀಯ ಸ್ಥಾನ ಗಳಿಸಿದ್ದರು.

ಸೋಮವಾರ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಶಸ್ತಿಗಳು ಘೋಷಣೆಯಾಗಿದ್ದು 8 ಮಂದಿ ‘ಕ್ರೀಡಾ ರತ್ನ’ಗಳಲ್ಲಿ ದಕ್ಷಿಣ ಕನ್ನಡಕ್ಕೆ ಶ್ರೀಧರ ಗೌರವ ತಂದುಕೊಟ್ಟಿದ್ದಾರೆ.

ADVERTISEMENT

ತುಂಬು ಕುಟುಂಬದಲ್ಲಿ ಸ್ವಂತ ತೋಟದ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ 36 ವರ್ಷದ ಶ್ರೀಧರ ಅವರು ಗದ್ದೆ–ತೋಟಗಳಲ್ಲಿ ಕೋಣಗಳನ್ನು ಓಡಿಸುತ್ತ ಕಂಬಳದ ‘ಕರೆ’ ತಲುಪಿದವರು. ಮೂಡುಬಿದಿರೆಯ ಪನೋಳಿಬೈಲು ಕಂಬಳದಲ್ಲಿ ಪದಾರ್ಪಣೆ ಮಾಡಿದ ಅವರು ನಂತರ ಈ ಕ್ರೀಡೆಯಲ್ಲಿ ಪಳಗಿದರು. ಈಗ ಕಂಬಳದ ನಾಲ್ಕೂ ವಿಭಾಗಗಳಲ್ಲಿ ಕೋಣಗಳನ್ನು ಓಡಿಸಬಲ್ಲ ಚತುರ.

ವಾಲಿಬಾಲ್‌ಗೆ ಮೀಸಲು ಸಂಸ್ಥೆ

ಕ್ರೀಡಾ ಪೋಷಕ ಪ್ರಶಸ್ತಿ ಗಳಿಸಿರುವ ಮಂಗಳೂರಿನ ಮಂಗಳ ಫ್ರೆಂಡ್ಸ್ ಸರ್ಕಲ್ ನಾಲ್ಕು ದಶಕಗಳಿಂದ ಉಚಿತ ವಾಲಿಬಾಲ್ ತರಬೇತಿ ನೀಡುತ್ತಿದೆ. ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದೆ. ಉರ್ವಸ್ಟೋರ್‌ನಲ್ಲಿ, ಸರ್ಕಾರ ನೀಡಿರುವ ನಾಲ್ಕು ಸೆಂಟ್ ಜಾಗವನ್ನೇ ಅಂಗಣ ಮಾಡಿಕೊಂಡಿರುವ ಸಂಸ್ಥೆಯಲ್ಲಿ ಅರುಣ್ ಬ್ಯಾಪ್ಟಿಸ್ಟ್‌, ಮನೋಜ್‌, ಗುರುಪ್ರಸಾದ್ ರಾವ್ ಮತ್ತು ದೀಪಕ್ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

‘ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ನಾಗೇಶ್ ಎ ಅವರು ಸ್ಥಾಪಿಸಿದ ಸಂಸ್ಥೆ ಇದು. ಸಿಎಜಿ ಆಟಗಾರ ಸುನಿಲ್ ಬಾಳಿಗಾ, ಪೊಲೀಸ್ ಅಧಿಕಾರಿ ಗಣೇಶ್ ಮುಂತಾದವರು ಈ ಸಂಸ್ಥೆಯಲ್ಲಿ ಬೆಳೆದವರು. ಸಂಸ್ಥೆಯ ಕಾರ್ಯಗಳನ್ನು ಕಂಡು ಸರ್ಕಾರ ಜಾಗವನ್ನೂ ₹ 40 ಲಕ್ಷ ಮೊತ್ತವನ್ನೂ ಬಿಡುಗಡೆ ಮಾಡಿದೆ. ಈಗ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಇದು ಖುಷಿಪಡುವ ಸಮಯ’ ಎಂದು ಅಧ್ಯಕ್ಷ ರಮೇಶ್ ಎಲ್‌.ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.