ADVERTISEMENT

ಕುಸ್ತಿಪಟುಗಳ ಪ್ರತಿಭಟನೆ: ಮೌನ ಏಕೆ, ಮೋದಿಗೆ ಸಿಬಲ್‌ ಪ್ರಶ್ನೆ

ಪಿಟಿಐ
Published 6 ಮೇ 2023, 19:11 IST
Last Updated 6 ಮೇ 2023, 19:11 IST
ಕಪಿಲ್‌ ಸಿಬಲ್‌
ಕಪಿಲ್‌ ಸಿಬಲ್‌   

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ನ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ಏಕೆ ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್ ಪ್ರಶ್ನಿಸಿದ್ದಾರೆ.

ಆರೋಪ ಕುರಿತ ತನಿಖೆಯು ಪೂರ್ಣಗೊಳ್ಳುವವರೆಗೂ ಬ್ರಿಜ್‌ ಭೂಷಣ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸುವುದಿಲ್ಲವೇ? ಚುನಾವಣೆ ದೃಷ್ಟಿಯಿಂದ ಉತ್ತರ ಪ್ರದೇಶದಲ್ಲಿ ಅವರಿಗೆ ಅಷ್ಟೊಂದು ಮಹತ್ವ ಇದೆಯೇ ಎಂದೂ ಪ್ರಶ್ನಿಸಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಅಧ್ಯಕ್ಷ ಸ್ಥಾನದಿಂದ ತೆಗೆಯದಷ್ಟು ಮುಖ್ಯವಾದ ವ್ಯಕ್ತಿಯೆ? ಹಾಗಿದ್ದರೆ ಬೇಟಿ ಬಚಾವೋ ಘೋಷಣೆ ಏನಾಯ್ತು’ ಎಂದು ಕೇಳಿದ್ದಾರೆ.

ADVERTISEMENT

ಲೈಂಗಿಕ ಕಿರುಕುಳ ಆರೋಪ ಕುರಿತಂತೆ ಏಳು ಮಂದಿ ಕುಸ್ತಿಪಟುಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ ಹಿಂದೆಯೇ ಸಿಬಲ್ ಈ ಬಗ್ಗೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕುಸ್ತಿಪಟುಗಳ ಪರವಾಗಿ ಸಿಬಲ್‌ ಅವರು ವಾದ ಮಂಡಿಸುತ್ತಿದ್ದಾರೆ. ದೆಹಲಿ ಪೊಲೀಸರು ಏಪ್ರಿಲ್‌ 28ರಂದು ಕುಸ್ತಿ ಫೆಡರೇಷನ್‌ನ ಮುಖ್ಯಸ್ಥರ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಿದ್ದರು.

ಕ್ರಮಕ್ಕೆ ಆಗ್ರಹ: ಎಎಪಿ ಧರಣಿ

ಮುಂಬೈ (ಪಿಟಿಐ): ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಕುರಿತು ತನಿಖೆಗೆ ಒತ್ತಾಯಿಸಿ ಆಮ್‌ ಆದ್ಮಿ ಪಕ್ಷ (ಎಎಪಿ) ಕಾರ್ಯಕರ್ತರು ಇಲ್ಲಿ ಪ್ರತಿಭಟಿಸಿದರು.

ಕುಸ್ತಿಪಟುಗಳ ಆರೋಪ ಕುರಿತು ತನಿಖೆ ನಡೆಸಿ, ಫೆಡರೇಷನ್ ಮತ್ತು ಅದರ ಅಧ್ಯಕ್ಷರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.