ಪ್ಯಾರಿಸ್: ಭಾರತದ ಪಿ.ವಿ.ಸಿಂಧು ಅವರು ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ ಬೀವೆನ್ ಜಾಂಗ್ ವಿರುದ್ಧ ಗೆಲುವು ಸಾಧಿಸಿ ಗುರುವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಅವರು ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದರು.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು 13-21, 21-10, 21-14 ಅಂತರದಿಂದ ವಿಶ್ವದ 10ನೇ ಕ್ರಮಾಂಕದ ಜಾಂಗ್ ಅವರನ್ನು ಸೋಲಿಸಿದರು.
ವಿಶ್ವದ 11ನೇ ರ್‍ಯಾಂಕ್‌ನ ಆಟಗಾರ್ತಿ ಸಿಂಧು ಮುಂದಿನ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಚೀನಾದ ಚೆನ್ ಯು ಫೀ ಅಥವಾ ಡೆನ್ಮಾರ್ಕ್‌ನ ಲೈನ್ ಕ್ರಿಸ್ಟೋಫರ್ಸನ್ ಅವರನ್ನು ಎದುರಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕದ ಮೇಲೆ ಕಣ್ಣಿಟ್ಟಿರುವ ಅವರಿಗೆ ಈ ಪಂದ್ಯ ಪ್ರಮುಖವಾಗಿದೆ.
ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಸಿಂಧು, ನಂತರ ಪುಟಿದೆದ್ದು ಎರಡನೇ ಗೇಮ್‌ನಲ್ಲಿ ಪಾರಮ್ಯ ಮೆರೆದರು. ಮೂರನೇ ಗೇಮ್‌ನಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದರು.
ಬುಧವಾರ ಚೀನಾ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಉತ್ತಮ ಆಟ ಪ್ರದರ್ಶಿಸಿದ ಶ್ರೀಕಾಂತ್, ಈ ಬಾರಿ ಚೀನಾದ ಗುವಾಂಗ್ ಜು ವಿರುದ್ಧ ಸೋಲನ್ನು ಅನುಭವಿಸಿದರು. 78 ನಿಮಿಷಗಳ ಹೋರಾಟದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ 21-19, 12-21, 20-22 ಅಂತರದಲ್ಲಿ ವಿಶ್ವದ 17ನೇ ರ್‍ಯಾಂಕ್ ಆಟಗಾರನ ವಿರುದ್ಧ ಸೋತರು.
ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಶ್ರೀಕಾಂತ್ ನಂತರ ಹಿನ್ನಡೆ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.