ADVERTISEMENT

ಆಲ್‌ ಇಂಗ್ಲೆಂಡ್‌ ಓಪನ್: ಸೆಮಿಫೈನಲ್‌ನಲ್ಲಿ ಸಿಂಧುಗೆ ಸೋಲು

ಪಿಟಿಐ
Published 20 ಮಾರ್ಚ್ 2021, 13:48 IST
Last Updated 20 ಮಾರ್ಚ್ 2021, 13:48 IST
ಪೊರ್ನಾಪವಿ ಚೊಚುವಾಂಗ್ ಎದುರಿನ ಪಂದ್ಯದಲ್ಲಿ ಷಟಲ್ ಹಿಂದಿರುಗಿಸಿದ ಪಿ.ವಿ.ಸಿಂಧು –ಎಎಫ್‌ಪಿ ಚಿತ್ರ
ಪೊರ್ನಾಪವಿ ಚೊಚುವಾಂಗ್ ಎದುರಿನ ಪಂದ್ಯದಲ್ಲಿ ಷಟಲ್ ಹಿಂದಿರುಗಿಸಿದ ಪಿ.ವಿ.ಸಿಂಧು –ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಂ: ಭಾರತದ ಪಿ.ವಿ.ಸಿಂಧು ಮತ್ತೊಮ್ಮೆ ಸೆಮಿಫೈನಲ್‌ನಲ್ಲಿ ಎಡವಿದರು. ಶನಿವಾರ ನಡೆದ ಆಲ್‌ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು ಥಾಯ್ಲೆಂಡ್‌ನ ಪೊರ್ನಾಪವಿ ಚೊಚುವಾಂಗ್ ಎದುರು ಸೋತು ಹೊರಬಿದ್ದರು.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ವಿಶ್ವ ಚಾಂಪಿಯನ್ ಸಿಂಧು ವಿಶ್ವದ 11ನೇ ಕ್ರಮಾಂಕದ ಆಟಗಾರ್ತಿಯ ಚುರುಕಿನ ಆಟ ಮತ್ತು ಶಕ್ತಿಶಾಲಿ ಶಾಟ್‌ಗಳಿಗೆ ಉತ್ತರ ನೀಡಲಾಗದೆ 17-21, 9-21ರಲ್ಲಿ ಸೋಲುಂಡರು. ಪಂದ್ಯ ಕೇವಲ 43 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಸಿಂಧು ಆಲ್‌ ಇಂಗ್ಲೆಂಡ್‌ ಓಪನ್‌ನ 2018ರ ಆವೃತ್ತಿಯಲ್ಲೂ ಸೆಮಿಫೈನಲ್‌ನಲ್ಲಿ ಸೋತಿದ್ದರು. ಥಾಯ್ಲೆಂಡ್‌ನಲ್ಲಿ ನಡೆದ ಮೂರು ಟೂರ್ನಿಗಳು ಒಳಗೊಂಡಂತೆ ಕೋವಿಡ್ ನಂತರದ ಯಾವ ಟೂರ್ನಿಯಲ್ಲೂ ಅವರು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ.

ಸಿಂಧು ಮತ್ತು ಚೊಚುವಾಂಗ್ ಈ ಹಿಂದೆ ಒಟ್ಟು ಐದು ಬಾರಿ ಮುಖಾಮುಖಿಯಾಗಿದ್ದು ಸಿಂಧು ನಾಲ್ಕರಲ್ಲಿ ಗೆದ್ದಿದ್ದರು. ಜನವರಿಯಲ್ಲಿ ನಡೆದ ವಿಶ್ವ ಟೂರ್ ಫೈನಲ್ಸ್‌ನಲ್ಲೂ ಸಿಂಧು ಮೇಲುಗೈ ಸಾಧಿಸಿದ್ದರು. ಆದರೆ ಶನಿವಾರದ ಪಂದ್ಯದಲ್ಲಿ ಚೊಚೊವಾಂಗ್ ಭರ್ಜರಿ ಆಟವಾಡಿದರು.

ADVERTISEMENT

ಶುಕ್ರವಾರ ರಾತ್ರಿ ಜಪಾನ್‌ನ ಅಕಾನೆ ಯಮಗುಚಿ ಎದುರು 16-21, 21-16, 21-19ರಲ್ಲಿ ಗೆದ್ದು ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.