ಲಖನೌ: ಅಗ್ರ ಶ್ರೇಯಾಂಕದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಪಾರಮ್ಯ ಮೆರೆದು ಸೈಯದ್ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾನುವಾರ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಆತಿಥೇಯರ ಸಂಭ್ರಮ ಹೆಚ್ಚಿಸಿದರು.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಸಿಂಧು 21–14, 21–16 ರಿಂದ ವಿಶ್ವ ಕ್ರಮಾಂಕದಲ್ಲಿ 119ನೇ ಸ್ಥಾನದಲ್ಲಿರುವ ಚೀನಾ ಆಟಗಾರ್ತಿ ವು ಲುವೊ ಯು ಅವರನ್ನು ಹಿಮ್ಮೆಟ್ಟಿಸಿ ಮೂರನೇ ಬಾರಿ ಇಲ್ಲಿ ಚಾಂಪಿಯನ್ ಆದರು. ಈ ಹಿಂದೆ ಹೈದರಾಬಾದ್‌ನ ಆಟಗಾರ್ತಿ 2017 ಮತ್ತು 2022ರಲ್ಲಿ ಇಲ್ಲಿ ವಿಜೇತರಾಗಿದ್ದರು.
ವಿಶ್ವ ಕ್ರಮಾಂಕದಲ್ಲಿ ಪ್ರಸ್ತುತ 18ನೇ ಕ್ರಮಾಂಕದಲ್ಲಿರುವ ಸಿಂಧು ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಯಾವುದೇ ಪ್ರಶಸ್ತಿ ಗೆದ್ದಿರಲಿಲ್ಲ. 2022ರ ಸಿಂಗಪುರ ಓಪನ್ ಟೂರ್ನಿಯಲ್ಲಿ ಕೊನೆಯ ಬಾರಿ ಅವರು ಸಿಂಗಲ್ಸ್ ಚಾಂಪಿಯನ್ ಆಗಿದ್ದರು.
ಮೊದಲ ಗೇಮ್‌ನಲ್ಲಿ 8–5 ಮುನ್ನಡೆ ಸಾಧಿಸಿದ ಸಿಂಧು, ಎದುರಾಳಿಯಿದ ಕೆಲಮಟ್ಟಿಗೆ ಪ್ರತಿರೋಧ ಎದುರಿಸಿದರು. ಮುನ್ನಡೆ ಒಂದು ಹಂತದಲ್ಲಿ 11–9ಕ್ಕೆ ಇಳಿದಿತ್ತು. ಆದರೆ ಕೆಲವು ರ‍್ಯಾಲೀಗಳ ಮೂಲಕ ಅವರು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಎರಡನೇ ಗೇಮ್‌ನಲ್ಲಿ ಎಡಗೈ ಆಟಗಾರ್ತಿ ವು ಕೆಲವು ಕರಾರುವಾಕ್ ‘ಡ್ರಾಪ್’ ಶಾಟ್‌ಗಳ ಹಾಕಿ ಪ್ರತಿರೋಧ ತೋರಿದರಲ್ಲದೇ 11–10ರಲ್ಲಿ ಒಂದು ಪಾಯಿಂಟ್ ಮುನ್ನಡೆ ಪಡೆದಿದ್ದರು. ಆದರೆ ಬ್ರೇಕ್ ನಂತರ ಸಿಂಧು ಚೇತರಿಸಿಕೊಂಡು ಎದುರಾಳಿ ಎಸಗಿದ ತಪ್ಪುಗಳ ಲಾಭ ಪಡೆಯತೊಡಗಿದರು. 15–11ರಲ್ಲಿ ಲೀಡ್ ಪಡೆದ ಅವರು ನಂತರ ಹಿಂದೆಬೀಳಲಿಲ್ಲ. ಪ್ರಬಲ ಸ್ಮ್ಯಾಶ್ ಮೂಲಕ ಗೆಲುವಿನ ಪಾಯಿಂಟ್ ಸಂಪಾದಿಸಿದರು.
ಸುಲಭ ಗೆಲುವು:
ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ, 2021ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ 21–6, 21–7 ರಿಂದ ಸಿಂಗಪುರದ ಜಿಯಾ ಹೆಂಗ್ ಜೇಸನ್ ಟೆ ಅವರನ್ನು ಸದೆಬಡಿದರು. ಪಂದ್ಯದುದ್ದಕ್ಕೂ ಅವರು ಅಧಿಕಾಯುತವಾಗಿ ಆಡಿದರು.
ಇದು 23 ವರ್ಷ ವಯಸ್ಸಿನ ಆಟಗಾರನಿಗೆ ಈ ಟೂರ್ನಿಯಲ್ಲಿ ಮೊದಲ ಪ್ರಶಸ್ತಿಯಾಗಿದೆ.
Cut-off box - ಟ್ರೀಸಾ–ಗಾಯತ್ರಿಗೆ ಮಹಿಳಾ ಡಬಲ್ಸ್ ಪ್ರಶಸ್ತಿ ಎರಡನೇ ಶ್ರೇಯಾಂಕದ ಟ್ರೀಸಾ ಜೋಳಿ–ಗಾಯತ್ರಿ ಗೋಪಿಚಂದ್ 21–18 21–11 ರಿಂದ ಚೀನಾದ ಬಾವೊ ಲಿ ಜಿಂಗ್– ಲಿ ಕ್ವಿಯಾನ್ ಜೋಡಿಯನ್ನು ಸೋಲಿಸುವ ಮೂಲಕ ತಮ್ಮ ಮೊದಲ ಬಾರಿ ಸೂಪರ್ 300 ಮಟ್ಟದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಈ ಟೂರ್ನಿಯ ಇತಿಹಾಸದಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಜೋಡಿ ಎಂಬ ಗೌರವವೂ ಟ್ರೀಸಾ–ಗಾಯತ್ರಿ ಪಾಲಾಯಿತು. 2022ರಲ್ಲಿ ಇವರಿಬ್ಬರು ರನ್ನರ್ ಅಪ್ ಆಗಿದ್ದರು. ಈ ಬಾರಿ ಉತ್ತಮ ಪ್ರದರ್ಶನ ನೀಡಿ ಒಂದು ಹೆಜ್ಜೆ ಮುಂದಿಟ್ಟರು. ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತದ ಪ್ರಥ್ವಿ ಕೃಷ್ಣಮೂರ್ತಿ– ಸಾಯಿಪ್ರತೀಕ್ ಕೆ. ಜೋಡಿ ವೀರೋಚಿತ ಹೋರಾಟ ಪ್ರದರ್ಶಿಸಿದರೂ 14–21 21–19 17–21ರಲ್ಲಿ ಚೀನಾದ ಹುವಾಂಗ್ ಡಿ– ಲಿಯು ಯಾಂಗ್ ಜೋಡಿಗೆ ಮಣಿಯಿತು. ಈ ಪಂದ್ಯ 71 ನಿಮಿಷ ನಡೆಯಿತು. ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ತನಿಶಾ ಕ್ರಾಸ್ಟೊ– ಧ್ರುವ್ ಕಪಿಲಾ ಜೋಡಿ ಕೂಡ ಮೂರು ಗೇಮ್‌ಗಳ ಹೋರಾಟದಲ್ಲಿ ಮಣಿಯಿತು. ಥಾಯ್ಲೆಂಡ್‌ನ ದೇಚಾಪೊಲ್ ಪುವಾರನುಕ್ರೊ– ಸುಪಿಸ್ಸರ ಪೇವಸಂಪ್ರ್ ಜೋಡಿ 18–21 21–14 21–8 ರಿಂದ ಭಾರತದ ಜೋಡಿಯನ್ನು ಹಿಮ್ಮೆಟ್ಟಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.