ADVERTISEMENT

ಬ್ಯಾಡ್ಮಿಂಟನ್‌: ಸಿಂಧು, ಪ್ರಣಯ್‌ಗೆ ನಿರಾಸೆ

ಇಂಡೊನೇಷ್ಯಾ ಓಪನ್‌: ಭಾರತದ ಆಟಗಾರರ ಸವಾಲು ಅಂತ್ಯ

ಪಿಟಿಐ
Published 6 ಜುಲೈ 2018, 19:59 IST
Last Updated 6 ಜುಲೈ 2018, 19:59 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಜಕಾರ್ತ: ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಸಿಂಧು 14–21, 15–21ರಲ್ಲಿ ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧ ಆಘಾತ ಅನುಭವಿಸಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಸಿಂಧು 37 ನಿಮಿಷಗಳಲ್ಲಿ ಸೋಲೊಪ್ಪಿಕೊಂಡರು.

ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಹೆಗ್ಗಳಿಕೆ ಹೊಂದಿರುವ ಸಿಂಧು, ಮೊದಲ ಗೇಮ್‌ನಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಇದರ ಹೊರತಾಗಿಯೂ ಚೀನಾದ ಆಟಗಾರ್ತಿ 10–8ರ ಮುನ್ನಡೆ ತಮ್ಮದಾಗಿಸಿಕೊಂಡರು. ಈ ಹಂತದಲ್ಲಿ ಪರಿಣಾಮಕಾರಿ ಆಟ ಆಡಿದ ಸಿಂಧು ಹಿನ್ನಡೆಯನ್ನು 10–11ಕ್ಕೆ ತಗ್ಗಿಸಿಕೊಂಡರು.

ADVERTISEMENT

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಬಿಂಗ್‌ಜಿಯಾವೊ ಎರಡನೇ ಗೇಮ್‌ನಲ್ಲೂ ಮೋಡಿ ಮಾಡಿದರು. ಫೋರ್‌ಹ್ಯಾಂಡ್‌ ಮತ್ತು ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು 17–11ರ ಮುನ್ನಡೆ ಗಳಿಸಿದರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಸಿಂಧು, ಹಲವು ತಪ್ಪುಗಳನ್ನು ಮಾಡಿ ಪಂದ್ಯ ಕೈಚೆಲ್ಲಿದರು.

ಪ್ರಣಯ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಪ್ರಣಯ್‌ 17–21, 18–21ರಲ್ಲಿ ಚೀನಾದ ಶಿ ಯೂಕಿ ವಿರುದ್ಧ ಸೋತರು. ಈ ಹೋರಾಟ 39 ನಿಮಿಷ ನಡೆಯಿತು.

ಪ್ರಣಯ್‌ ವಿರುದ್ಧ 3–1ರ ಗೆಲುವಿನ ದಾಖಲೆ ಹೊಂದಿದ್ದ ಯೂಕಿ ಮೊದಲ ಗೇಮ್‌ನಲ್ಲಿ ಅಬ್ಬರಿಸಿದರು. 6–3, 8–5, 11–8, 17–13 ಹೀಗೆ ಮುನ್ನಡೆ ಹೆಚ್ಚಿಸಿಕೊಂಡು ಸಾಗಿದ ಅವರು ಸುಲಭವಾಗಿ ಗೆದ್ದರು.

ಎರಡನೇ ಗೇಮ್‌ನಲ್ಲಿ ಪ್ರಣಯ್‌ ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಎದುರಾಳಿ ಆಟಗಾರ ನೆಟ್‌ನ ಸಮೀಪದಲ್ಲಿ ಡ್ರಾಪ್ ಮಾಡುತ್ತಿದ್ದ ಷಟಲ್‌ ಹಿಂತಿರುಗಿಸಲು ಪ್ರಯಾಸ ಪಟ್ಟ ಭಾರತದ ಆಟಗಾರ 8–11ರ ಹಿನ್ನಡೆ ಕಂಡರು. ನಂತರ ಪರಿಣಾಮಕಾರಿಯಾಗಿ ಆಡಿ ಹಿನ್ನಡೆಯನ್ನು 16–17ಕ್ಕೆ ತಗ್ಗಿಸಿಕೊಂಡರು. ಈ ಹಂತದಲ್ಲಿ ಯೂಕಿ ಛಲದಿಂದ ಹೋರಾಡಿ ಗೆಲುವಿನ ತೋರಣ ಕಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.