ಕ್ವಾಲಾಲಂಪುರ : ಭಾರತದ ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸ್ಪೇನ್‌ನ ಕೆರೊಲಿನಾ ಮರಿನ್ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧು 22–20, 21–19 ರಿಂದ ಮರಿನ್ ವಿರುದ್ಧ ಜಯಿಸಿದರು.
ಮೊದಲ ಗೇಮ್‌ನಲ್ಲಿ ತುರುಸಿನ ಪೈಪೋಟಿ ನಡೆಯಿತು. ಮರಿನ್ ಅವರ ಚುರುಕಾದ ಆಟಕ್ಕೆ ಸಿಂಧು ತಿರುಗೇಟು ನೀಡಿದರು. ಶರವೇಗದ ಸ್ಮ್ಯಾಷ್‌ಗಳು ಮತ್ತು ಚುರುಕಾದ ರಿಟರ್ನ್‌ಗಳನ್ನು ಮಾಡಿದರು. ಇದರಿಂದಾಗಿ ಗೇಮ್‌ನ ಬಹುತೇಕ ಭಾಗದಲ್ಲಿ ಸಮಬಲದ ಹೋರಾಟ ಕಂಡುಬಂದಿತು. ಆದರೆ ಕೊನೆಯ ಹಂತದಲ್ಲಿ ಸಿಂಧು ಮೇಲುಗೈ ಸಾಧಿಸಿದರು. ಎರಡನೇ ಗೇಮ್ ಕೂಡ ಇದೇ ರೀತಿ ನಡೆಯಿತು.
ಸೆಮಿಗೆ ಶ್ರೀಕಾಂತ್: ಭಾರತದ ಕಿದಂಬಿ ಶ್ರೀಕಾಂತ್ ಅವರು ಗೆಲುವಿನ ಓಟ ಮುಂದುವರಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದ ಶ್ರೀಕಾಂತ್, ಫ್ರಾನ್ಸ್‌ನ ಬ್ರೈಸ್ ಲೆವರೆಜ್ ಅವರನ್ನು 21–18, 21–14ರಿಂದ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಮೊದಲ ಗೇಮ್‌ನಲ್ಲಿ ಶ್ರೀಕಾಂತ್ ಅವರಿಗೆ ತೀವ್ರ ಪೈಪೋಟಿ ನೀಡಿದ ಲೆವರೆಜ್ ಅವರು ತಾವೇ ಮಾಡಿದ ಕೆಲ ತಪ್ಪುಗಳಿಂದಾಗಿ ಪಾಯಿಂಟ್ ಕಳೆದುಕೊಂಡರು. ಎರಡನೇ ಸೆಟ್‌ನಲ್ಲಿ ಭಾರತದ ಆಟಗಾರ ಆಕರ್ಷಕ ಸ್ಮ್ಯಾಷ್ ಹಾಗೂ ರಿಟರ್ನ್‌ಗಳಿಂದ ಗಮನ ಸೆಳೆದರು.
ಇದೇ ವರ್ಷದಲ್ಲಿ ನಡೆದ ‘ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್’ನಲ್ಲಿ ಶ್ರೀಕಾಂತ್ ಅವರು ಫ್ರಾನ್ಸ್‌ನ ಆಟಗಾರನನ್ನು ಸೋಲಿಸಿದ್ದರು. ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶ್ರೀಕಾಂತ್ ಅವರು ಬೆಳ್ಳಿಯ ಸಾಧನೆ ಮಾಡಿದ್ದರು.
ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಅವರು ಜಪಾನ್‌ನ ಕೆಂಟೊ ಮೊಮೊಟಾ ಅವರನ್ನು ಎದುರಿಸಲಿದ್ದಾರೆ. ಕೆಂಟೊ ಅವರು ಇದೇ ವರ್ಷದ ಥಾಮಸ್ ಕಪ್ ಹಾಗೂ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಧನೆ ತೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.