ADVERTISEMENT

ಹೈಜಂಪ್ ಹುಡುಗಿ ಪ್ರಿಯಾಂಕಾ

ಕೀರ್ತನೆ ಈಕೆಯ ನೆಚ್ಚಿನ ಹವ್ಯಾಸ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 11:39 IST
Last Updated 18 ಫೆಬ್ರುವರಿ 2020, 11:39 IST
ಪದಕಗಳೊಂದಿಗೆ ಪ್ರಿಯಾಂಕಾ ಹೆಗಡೆ
ಪದಕಗಳೊಂದಿಗೆ ಪ್ರಿಯಾಂಕಾ ಹೆಗಡೆ   

ಶಿರಸಿ: ಶಾಲೆಯಲ್ಲಿ ಆಟದ ಅವಧಿಯಲ್ಲಿ ಗೆಳತಿಯರೊಂದಿಗೆ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕಿ ಚಾಕಚಕ್ಯತೆಯನ್ನು ಕಂಡ ಶಿಕ್ಷಕರು, ಈಕೆಯನ್ನು ಕೊಕ್ಕೊ ತಂಡಕ್ಕೆ ಸೇರಿಸಿದರು. ಈ ಬಾಲಕಿಯ ಕ್ರೀಡಾ ಪ್ರತಿಭೆಗೆ ಇದೇ ಮೊದಲ ಮೆಟ್ಟಿಲಾಯಿತು.

ಇಲ್ಲಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಿಯಾಂಕಾ ಪರಮಾನಂದ ಹೆಗಡೆ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದಾಳೆ. ಐದನೇ ಕ್ಲಾಸಿನಲ್ಲಿರುವ ಗುಂಪು ಆಟಕ್ಕೆ ಸೇರಿಕೊಂಡ ಈಕೆ, ನಂತರ ಆರನೇ ತರಗತಿಯಲ್ಲಿರುವಾಗ ವೈಯಕ್ತಿಕ ಆಟದಲ್ಲಿ ಭಾಗವಹಿಸಿ, ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದಳು. ಏಳನೇ ತರಗತಿಯಲ್ಲಿ ಹರ್ಡಲ್ಸ್, ಎತ್ತರ ಜಿಗಿತದಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದಳು.

ಗುಂಪು ಆಟದಲ್ಲೂ ಸೈ ಎನಿಸಿಕೊಂಡಿರುವ ಈಕೆ, ರಿಲೆ, ಕೊಕ್ಕೊ ತಂಡದ ಉತ್ತಮ ಆಟಗಾರ್ತಿ. ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಕ್ರೀಡೆಗೆ ವಿದಾಯ ಹೇಳುವವರೇ ಹೆಚ್ಚು. ಆದರೆ, ಪ್ರಿಯಾಂಕಾ ಇದಕ್ಕೆ ಹೊರತಾಗಿದ್ದಾಳೆ. ಪಿಯುಸಿ ಎರಡೂ ವರ್ಷಗಳಲ್ಲೂ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬಹುಮಾನ ಗೆದ್ದಿದ್ದಾಳೆ. ಇತ್ತೀಚೆಗೆ ನಡೆದ 110 ಮೀಟರ್ ಹರ್ಡಲ್ಸ್, 400 ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮಳಾಗಿ, ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿದ್ದಳು. ದಸರಾ ಕ್ರೀಡಾಕೂಟ, ಮಾರಿಕಾಂಬಾ ದೇವಾಲಯದ ಕ್ರೀಡಾಕೂಟದಲ್ಲಿ ಬಹುಮಾನ ಬಾಚಿದ್ದಾಳೆ. ಕೀರ್ತನೆ ಮಾಡುವುದು, ಹಾಡುವುದು ಈಕೆಯ ಹವ್ಯಾಸ.

ADVERTISEMENT

‘ಶಿರಸಿಯಲ್ಲಿ ಕ್ರೀಡಾಪಟುಗಳಿಗೆ ತರಬೇತುದಾರರ ಕೊರತೆಯಿದೆ. ಉತ್ತಮ ತರಬೇತುದಾರರಿದ್ದರೆ, ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡುವ ಸಾಮರ್ಥ್ಯದ ಮಕ್ಕಳು ಈ ಭಾಗದಲ್ಲಿದ್ದಾರೆ. ಪ್ರಮುಖ ಕ್ರೀಡಾಕೂಟಗಳು ಡಿಸೆಂಬರ್ ವೇಳೆಗೆ ನಡೆಯುತ್ತವೆ. ಆಗ ಶಾಲೆಯಲ್ಲಿ ಪಾಠ ವೇಗವಾಗಿ ಓಡುವ ಸಮಯ. ಸಹಜವಾಗಿ ಶಿಕ್ಷಕರು ಓದಿನ ಕಡೆಗೆ ಗಮನಹರಿಸಲು ಹೇಳುತ್ತಾರೆ. ಹೀಗಾಗಿ, ಕ್ರೀಡೆಯಲ್ಲಿ ಮಕ್ಕಳಿಂದ ನಿರೀಕ್ಷಿತ ಫಲಿತಾಂಶ ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ ಪ್ರಿಯಾಂಕಾ ತಾಯಿ ಸುಮಿತ್ರಾ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.