ADVERTISEMENT

ಕ್ರೀಡಾ ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ: ಜಿಮ್‌ನಲ್ಲಿ ಕಸದ ರಾಶಿ, ಕೊಠಡಿಯಲ್ಲಿ ಕೊಳಕು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 19:45 IST
Last Updated 15 ಫೆಬ್ರುವರಿ 2020, 19:45 IST
ಕ್ರೀಡಾ ಸಚಿವ ಸಿ.ಟಿ.ರವಿ ಅವರು ಮೈಸೂರಿನ ಕ್ರೀಡಾ ಹಾಸ್ಟೆಲ್‌ಗೆ ಭೇಟಿ ನೀಡಿ ಕ್ರೀಡಾಪಟುಗಳ ಸಮಸ್ಯೆ ಆಲಿಸಿದರು
ಕ್ರೀಡಾ ಸಚಿವ ಸಿ.ಟಿ.ರವಿ ಅವರು ಮೈಸೂರಿನ ಕ್ರೀಡಾ ಹಾಸ್ಟೆಲ್‌ಗೆ ಭೇಟಿ ನೀಡಿ ಕ್ರೀಡಾಪಟುಗಳ ಸಮಸ್ಯೆ ಆಲಿಸಿದರು   

ಮೈಸೂರು: ಜಿಮ್‌ನಲ್ಲಿ ಕಸದ ರಾಶಿ, ಕೊಠಡಿಗಳಲ್ಲಿ ಗಲೀಜು, ಗಬ್ಬುನಾರುವ ಶೌಚಾಲಯ, ಚಿಲಕವಿಲ್ಲದ ಬಾಗಿಲು ಹಾಗೂ ನೀರಿನ ಸಮಸ್ಯೆ...

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿರುವ ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಹಾಸ್ಟೆಲ್‌ನೊಳಗಿನ ಸ್ಥಿತಿ ಇದು. ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ ಕ್ರೀಡಾ ಸಚಿವ ಸಿ.ಟಿ.ರವಿ ಅವರಿಗೆ ಇಲ್ಲಿನ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದರು.

‘ಕ್ರೀಡಾ ಹಾಸ್ಟೆಲ್‌ನ ದುಸ್ಥಿತಿ ನೋಡಿ ಬೇಸರವಾಗಿದೆ. ಮೆನು ಚಾರ್ಟ್‌ ಕೂಡ ಹಾಕಿಲ್ಲ. ಕೋಳಿ ಮಾಂಸ ತಿಂದರೆ ಭೇದಿ ಆಗುತ್ತೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಸತ್ತ ಪ್ರಾಣಿಗಳ ಮಾಂಸವನ್ನು ಕಡಿಮೆ ಬೆಲೆಗೆ ತಂದು ಕೊಡುತ್ತಿದ್ದಾರೆಯೋ ಏನೋ’ ಎಂದು ಸಚಿವರು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಟಿಎ, ಡಿಎ ಸರಿಯಾಗಿ ಬರುತ್ತಿಲ್ಲ ಎಂಬುದಾಗಿ ದೂರು ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಇರುವುದು ಸುಮಾರು 2,500 ಕ್ರೀಡಾಪಟುಗಳು. ಅವರಿಗೆ ವಿತರಿಸುವಲ್ಲಿ ವ್ಯತ್ಯಾಸ ಏಕೆ? ಮೂರೂವರೆ ಕೋಟಿ ರೈತರ ಖಾತೆಗಳಿಗೆ ಸರ್ಕಾರ ಸರಿಯಾಗಿ ಹಣ ಹಾಕುತ್ತಿದೆಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಉದ್ಯೋಗಿಯೊಬ್ಬರು ಹಾಸ್ಟೆಲ್‌ ನಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ದೂರು ಬಂದಿದೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿರುವ ಈ ಉದ್ಯೋಗಿಯು ತರಬೇತಿಗಾಗಿ ಕೊಠಡಿಯಲ್ಲಿದ್ದಾರೆ ಎಂಬುದು ಗೊತ್ತಾಗಿದೆ. ಹೀಗಾಗಿ ಸುಮ್ಮನಾದೆ’ ಎಂದರು.

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಕೆಲ ಕ್ರೀಡಾಪಟುಗಳಿಗೆ ಟ್ರ್ಯಾಕ್‌ ಸೂಟ್‌ ನೀಡಿಲ್ಲ. ದಸರಾ ಕ್ರೀಡಾಕೂಟದಲ್ಲಿ ಗೆದ್ದವರಿಗೆ ಬಹುಮಾನ ಹಣ ಕೊಡುವ ವಿಚಾರದಲ್ಲಿ ವರದಿ ನೀಡುವಂತೆ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.