ADVERTISEMENT

ಕರಾಟೆ, ಹ್ಯಾಂಡ್‌ಬಾಲ್‌ ಚಟುವಟಿಕೆ: ಅಡ್‌ಹಾಕ್‌ ಸಮಿತಿ ರಚನೆಗೆ ಸೂಚನೆ

ಪಿಟಿಐ
Published 24 ಫೆಬ್ರುವರಿ 2026, 15:46 IST
Last Updated 24 ಫೆಬ್ರುವರಿ 2026, 15:46 IST
ಪಿ.ಟಿ. ಉಷಾ
ಪಿ.ಟಿ. ಉಷಾ   

ನವದೆಹಲಿ: ದೇಶದಲ್ಲಿ ಕರಾಟೆ ಮತ್ತು ಹ್ಯಾಂಡ್‌ಬಾಲ್ ಕ್ರೀಡೆಯ ಚಟುವಟಿಕೆಗಳನ್ನು ನಿರ್ವಹಿಸಲು ಅಡ್‌ಹಾಕ್‌ ಸಮಿತಿಗಳನ್ನು ರಚಿಸುವಂತೆ ಕ್ರೀಡಾ ಸಚಿವಾಲಯಯು ಭಾರತ ಒಲಿಂಪಿಕ್ ಸಂಸ್ಥೆಗೆ (ಐಒಎ) ಸೂಚನೆ ನೀಡಿದೆ. 

ಕರಾಟೆ ಮತ್ತು ಹ್ಯಾಂಡ್‌ಬಾಲ್ ಎರಡೂ ವಿಭಾಗಗಳ ಆಡಳಿತದಲ್ಲಿನ ‘ಗುಂಪುಗಾರಿಕೆ ಮತ್ತು ಗೊಂದಲ’ಗಳು ಕ್ರೀಡಾಪಟುಗಳಿಗೆ ಹಾನಿಯನ್ನು ಉಂಟು ಮಾಡುತ್ತಿರುವುದರಿಂದ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

ವರ್ಷಾಂತ್ಯದಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟದಲ್ಲಿ ಕರಾಟೆ ಮತ್ತು ಹ್ಯಾಂಡ್‌ಬಾಲ್ ಸ್ಥಾನ ಪಡೆದಿವೆ. ಹೀಗಾಗಿ, ಆ ಕ್ರೀಡೆಗಳ ಆಡಳಿತವು ರಚನಾತ್ಮಕವಾಗಿರುವುದು ಅತ್ಯಗತ್ಯ ಎಂದು ಸಚಿವಾಲಯವು ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಅವರಿಗೆ ಬರೆದ ಪತ್ರಗಳಲ್ಲಿ ಉಲ್ಲೇಖಿಸಿದೆ. ಜಪಾನ್‌ನಲ್ಲಿ ನಡೆಯಲಿರುವ ಕೂಟದ ಕರಾಟೆ ಸ್ಪರ್ಧೆಯಲ್ಲಿ 56 ಪದಕಗಳು ಮತ್ತು ಹ್ಯಾಂಡ್‌ಬಾಲ್‌ನಲ್ಲಿ ಆರು ಪದಕಗಳು ಒಳಗೊಂಡಿವೆ.

ADVERTISEMENT

ಕಳೆದ ವರ್ಷ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌), ಟಾರ್ಗೆಟ್ ಏಷ್ಯನ್ ಗೇಮ್ಸ್ ಗ್ರೂಪ್ (ಟಿಎಜಿಜಿ) ಯೋಜನೆಯ ಮೂಲಕ ಏಷ್ಯನ್ ಗೇಮ್ಸ್‌ಗೆ ಸಿದ್ಧತೆಯ ಭಾಗವಾಗಿ ಲಖನೌದಲ್ಲಿ 48 ಕರಾಟೆಪಟುಗಳಿಗೆ 45 ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ 12 ಕೋಚ್‌ಗಳು ಮತ್ತು ನಾಲ್ವರು ಸಹಾಯಕ ಸಿಬ್ಬಂದಿ ಭಾಗವಹಿಸಿದ್ದರು.  

ಕ್ರೀಡಾ ಸಚಿವಾಲಯವು ಭಾರತ ಹ್ಯಾಂಡ್‌ಬಾಲ್ ಸಂಸ್ಥೆಗೆ ನೀಡಿದ್ದ ಮಾನ್ಯತೆಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆಹಿಡಿದಿದೆ. ಕರಾಟೆ ಕ್ರೀಡೆಗಾಗಿ ಸಮರ್ಪಕ ರಾಷ್ಟ್ರೀಯ ಒಕ್ಕೂಟವಿಲ್ಲ. ಹಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ರಾಷ್ಟ್ರೀಯ ಆಡಳಿತ ಪ್ರಾಧಿಕಾರವೆಂದು ಹೇಳಿಕೊಳ್ಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.