ADVERTISEMENT

ಒಲಂಪಿಕ್ಸ್ ತಯಾರಿಯಲ್ಲಿರುವ ಜ್ಯೋತಿರಾಜ್

ಜಿ.ಬಿ.ನಾಗರಾಜ್
Published 16 ಸೆಪ್ಟೆಂಬರ್ 2019, 11:27 IST
Last Updated 16 ಸೆಪ್ಟೆಂಬರ್ 2019, 11:27 IST
ಜ್ಯೋತಿರಾಜ್ ಕಂಬ ಹತ್ತುವ ಬಗೆ
ಜ್ಯೋತಿರಾಜ್ ಕಂಬ ಹತ್ತುವ ಬಗೆ   

ಬೃಹತ್ತಾದ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೊಂದರಂತೆ ಪೇರಿಸಿಟ್ಟು ನಿರ್ಮಿಸಿದ ಅಭೇದ್ಯ ಕೋಟೆ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮೂವತ್ತು ಅಡಿಯಷ್ಟು ಎತ್ತರದ ಕಲ್ಲಿನ ಗೋಡೆಯನ್ನು ಲೀಲಾಜಾಲವಾಗಿ ಏರುವ ಜ್ಯೋತಿರಾಜ್‌ ಏಳು ಸುತ್ತಿನ ಕೋಟೆಯ ವಿಸ್ಮಯ. ಕಲ್ಲುಗಳ ಸಂದುಗಳ ನಡುವೆ ಕಾಲಿಡುತ್ತ ನಿಧಾನವಾಗಿ ಮೇಲೇರುವುದನ್ನು ಕಂಡು ಹುಬ್ಬೇರಿಸದವರೇ ಇಲ್ಲ. ಮಳೆ, ಗಾಳಿ, ಬಿಸಿಲಿಗೆ ಜಗ್ಗದೆ ಬೆಟ್ಟದ ಮೇಲೆ ಅಕಾಲದಿಂದ ನಿಂತಿರುವ ಹೆಬ್ಬಂಡೆ ಕೂಡ ಜ್ಯೋತಿರಾಜ್‌ಗೆ ಶರಣಾಗಿದೆ. ತದೇಕಚಿತ್ತದಿಂದ ನೋಡಿದರೆ ಹಾಲಿವುಡ್‌ ಚಿತ್ರದ ಸ್ಪೈಡರ್‌ಮ್ಯಾನ್‌ ಕಣ್ಮುಂದೆ ಹಾದು ಹೋಗುತ್ತಾರೆ. ಸಾಹಸ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಜ್ಯೋತಿರಾಜ್‌ ಫಿಟ್‌ನೆಸ್‌ ಗುಟ್ಟು ನಿರಂತರ ವ್ಯಾಯಾಮ.

ಕೋತಿಗಳ ರೀತಿಯಲ್ಲಿ ಬಂಡೆ, ಗೋಡೆ ಏರುವ ಜ್ಯೋತಿರಾಜ್‌ ಅವರನ್ನು ಜನರು ಪ್ರೀತಿಯಿಂದ ‘ಕೋತಿರಾಜ್‌’ ಎಂದು ಕರೆಯುತ್ತಾರೆ. ಚಿತ್ರದುರ್ಗದ ಕೋಟೆಯಲ್ಲಿರುವ ಕೋತಿಗಳ ದಂಡೇ ಇವರ ಗುರು. ಕೋತಿಗಳನ್ನು ಕಂಡರೆ ಅವರಿಗೂ ಇನ್ನಿಲ್ಲದ ಪ್ರೀತಿ. ಜ್ಯೋತಿರಾಜ್‌ ಸಾಮೀಪ್ಯಕ್ಕೆ ಕೋತಿಗಳು ಹಾತೊರೆಯುತ್ತವೆ. ಪ್ರೀತಿಯಿಂದ ಸುಳಿದಾಡುವ ಕೋತಿಗಳಿಗೆ ಹಸಿ ತರಕಾರಿ, ಹಣ್ಣುಗಳನ್ನು ನೀಡುವ ಜ್ಯೋತಿರಾಜ್‌ಗೆ ಈಗಲೂ ಇವೇ ಆಹಾರ. ‘ವಾಲ್‌ ಕ್ಲೈಂಬಿಂಗ್‌’ ವಿಭಾಗದಲ್ಲಿ ಒಲಿಂಪಿಕ್‌ಗೆ ಅರ್ಹತೆ ಗಳಿಸಲು ತಾಲೀಮು ನಡೆಸುತ್ತಿರುವ ಇವರು ನಿತ್ಯ ಇದೇ ಆಹಾರ ಸೇವಿಸುತ್ತಾರೆ. ಇವರ ದೇಹದ ಶಕ್ತಿಯ ಗುಟ್ಟು ಮೊಳಕೆ ಕಾಳು.

ವಿಚಿತ್ರ ಸನ್ನಿವೇಶವೊಂದು ಜ್ಯೋತಿರಾಜ್‌ ಅವರನ್ನು ಸಾಹಸದ ಜಗತ್ತಿಗೆ ತಳ್ಳಿತು. ಆ ಸನ್ನಿವೇಶವನ್ನು ಅವರು ಮುಜಗುಗರವಿಲ್ಲದೇ ಹೇಳಿಕೊಳ್ಳುತ್ತಾರೆ. ತಮಿಳುನಾಡಿನ ಕಾಮರಾಜಪುರಂ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಜ್ಯೋತಿರಾಜ್‌, ಜಾತ್ರೆಯಲ್ಲಿ ಪೋಷಕರಿಂದ ದೂರವಾಗಿ ಕರ್ನಾಟಕ ಸೇರಿದರು. 13ನೇ ವಯಸ್ಸಿಗೆ ಅಪರಿಚಿತ ಸ್ಥಳ ತಲುಪಿ ವಿಜಯಪುರದಲ್ಲಿ ಆಶ್ರಯ ಪಡೆದರು.

ADVERTISEMENT

ಕಟ್ಟಡ ಕಾರ್ಮಿಕರಾಗಿ ಚಿತ್ರದುರ್ಗಕ್ಕೆ ಬಂದ ಜ್ಯೋತಿರಾಜ್‌ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಮುಂದಾದರು. ಬಂಡೆಯಿಂದ ಹಾರಿ ಪ್ರಾಣ ಬಿಡಲು ಏಳು ಸುತ್ತಿನ ಕೋಟೆ ಏರಿದ್ದರು. ಅದೇ ಬಂಡೆಯ ಮೇಲೆ ಜಿಗಿದಾಡುತ್ತಿದ್ದ ಕೋತಿಯೊಂದು ಅವರ ಬದುಕಿನ ದಿಕ್ಕು ಬದಲಿಸಿತು. ಆತ್ಮಹತ್ಯೆಯ ಆಲೋಚನೆ ಕೈಬಿಟ್ಟು ಕೋತಿಯಂತೆ ಬಂಡೆ ಏರಲು ಪ್ರಾರಂಭಿಸಿದರು. ನೋಡನೋಡುತ್ತಿದ್ದಂತೆ ಚಿತ್ರದುರ್ಗದ ಕಲ್ಲಿನ ಕೋಟೆಯ ಮತ್ತೊಂದು ಆಕರ್ಷಣೆಯಾಗಿ ರೂಪುಗೊಂಡರು.

ಚಿತ್ರದುರ್ಗ, ಬಾದಾಮಿ, ಜೋಗ ಜಲಪಾತ ಸೇರಿ ಸುಮಾರು 400 ಸ್ಥಳಗಳಲ್ಲಿ ಜ್ಯೋತಿರಾಜ್‌ ಸಾಹಸ ಪ್ರದರ್ಶಿಸಿದ್ದಾರೆ. ಜಲಪಾತದಲ್ಲಿ ಆಯತಪ್ಪಿ ಬಿದ್ದು ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಪಡೆದ ವಿಶ್ರಾಂತಿ ಅವರ ದೇಹ ತೂಕವನ್ನು 85 ಕೆ.ಜಿ. ವರೆಗೂ ಹೆಚ್ಚಿಸಿತ್ತು. ಕಲ್ಲಿನ ಗೋಡೆಗೆ ದೇಹವನ್ನು ಒಗ್ಗಿಸಿಕೊಳ್ಳಲು ಇನ್ನಷ್ಟು ತೂಕ ಇಳಿಸಬೇಕಿದೆ. ಇದಕ್ಕೆ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ನಸುಕಿನ 5 ಗಂಟೆಯಿಂದ ಆರಂಭವಾಗುವ ಅವರ ತಾಲೀಮು ರಾತ್ರಿಯವರೆಗೂ ನಡೆಯುತ್ತದೆ. ಅವರಿಗೆ ಈಗ ಬೆಂಗಳೂರಿನಲ್ಲಿ ವಾಲ್‌ ಕ್ಲೈಂಬರ್‌ ಪ್ರವೀಣ್‌ ತರಬೇತಿ ನೀಡುತ್ತಿದ್ದಾರೆ.

‘ನಸುಕಿನಲ್ಲಿ ಎರಡು ಗಂಟೆ ದೇಹ ದಂಡಿಸುತ್ತೇನೆ. ಓಟ ಹಾಗೂ ವ್ಯಾಯಾಮ ದೇಹದ ತೂಕವನ್ನು ಕರಗಿಸಿದೆ. ಬೆಳಿಗ್ಗೆ 7ರಿಂದ 9 ಹಾಗೂ 10ರಿಂದ 12ರವರೆಗೆ ವಾಲ್‌ ಕ್ಲೈಂಬಿಂಗ್‌ ತರಬೇತಿ ಪಡೆಯುತ್ತೇನೆ. ವೇಗವಾಗಿ ಏರುವ, ಆಸರೆ ಪಡೆದು ನಾಜೂಕಿನಿಂದ ಹತ್ತುವ ಹಾಗೂ ಬೋರ್ಡಿಂಗ್‌ ವಿಭಾಗದಲ್ಲಿ ತಾಲೀಮು ನಡೆಸುತ್ತಿದ್ದೇನೆ. ಸಂಜೆ 4ರಿಂದ ರಾತ್ರಿಯವರೆಗೂ ಮತ್ತೆ ವ್ಯಾಯಾಮ, ತರಬೇತಿಯಲ್ಲಿ ತಲ್ಲೀನನಾಗುತ್ತೇನೆ’ ಎಂದು ಜ್ಯೋತಿರಾಜ್‌ ದಿನಚರಿಯನ್ನು ಮುಂದಿಟ್ಟರು.

‘ವಾಲ್‌ ಕ್ಲೈಂಬಿಂಗ್‌’ ವಿಭಾಗದಲ್ಲಿ ಒಲಿಂಪಿಕ್‌ನಲ್ಲಿ ಸ್ಪರ್ಧಿಸಬೇಕು ಎಂಬುದು ಜ್ಯೋತಿರಾಜ್‌ ಮಹದಾಸೆ. ಸ್ಯಾಂಡಲ್‌ವುಡ್‌ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಅವರನ್ನು ಕ್ರೀಡಾ ಜಗತ್ತು ಸೆಳೆದಿದೆ. ‘ನನ್ನ ಕ್ಷೇತ್ರ ಕ್ರೀಡೆಯೇ ಹೊರತು ಸಿನಿಮಾ ಅಲ್ಲ. ಗೋಡೆ ಹತ್ತುವ ಕ್ರೀಡೆಯಲ್ಲಿ ಸ್ಪರ್ಧಿಸಿ ದೇಶದ ಕೀರ್ತಿಯನ್ನು ವಿಶ್ವದಗಲ ಹರಡಬೇಕು’ ಎನ್ನುವ ಜ್ಯೋತಿರಾಜ್‌, 2018ರಿಂದ ತರಬೇತಿ ಪಡೆಯುತ್ತಿದ್ದಾರೆ.

ಚಿತ್ರದುರ್ಗದ ಧವಳಗಿರಿ ಬೆಟ್ಟದ ಕಲ್ಲಿನ ಗೋಡೆಗೆ ಕಬ್ಬಿಣದ ಸಲಾಕೆಗಳನ್ನು ಅಳವಡಿಸಿ ಅಭ್ಯಾಸ ನಡೆಸಿದರು. ಮನೆಯ ಪಕ್ಕದ ಖಾಲಿ ನಿವೇಶನದಲ್ಲಿ ಕೃತಕ ಗೋಡೆ ನಿರ್ಮಿಸಿ ಏಕಲವ್ಯನಂತೆ ತಾಲೀಮು ಮಾಡಿದರು. ಬಾದಾಮಿಯ ಕಲ್ಲಿನ ಬಂಡೆಯೊಂದನ್ನು ಗೋಡೆಯಾಗಿ ಪರಿವರ್ತಿಸಿಕೊಂಡು ಮೇಲೇರಿದರು. ಒಲಿಂಪಿಕ್‌ನ ಕೃತಕ ಗೋಡೆಗೂ, ಕಲ್ಲು ಬಂಡೆಗಳಿಗೂ ವ್ಯತ್ಯಾಸವಿದೆ ಎಂಬುದು ಅರಿವಿಗೆ ಬಂದ ಬಳಿಕ ಬೆಂಗಳೂರಿನಲ್ಲಿ ತರಬೇತಿಗೆ ಸೇರಿದರು.

‘ದೇಹವೇ ನನ್ನ ಪ್ರಯೋಗಶಾಲೆ. ದೇಹವನ್ನು ಹೇಗೆ ಬೇಕಾದರೂ ಪಳಗಿಸಲು ಸಾಧ್ಯವಿದೆ. ಮಿತ ಆಹಾರ ಸೇವನೆಯ ಅಭ್ಯಾಸ ಬೆಳೆಸಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಷ್ಟು ಆಹಾರ ಸೇವಿಸಿದರೆ ಮಾತ್ರ ದೇಹದ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಿದೆ’ ಎಂಬುದು ಜ್ಯೋತಿರಾಜ್‌ ಅನುಭವದ ಮಾತು.

ವಾಲ್‌ ಕ್ಲೈಂಬಿಂಗ್‌ ಸಾಹಸಕ್ಕೆ ಮಕ್ಕಳನ್ನು ಸೆಳೆಯುವ ಪ್ರಯತ್ನವನ್ನು ಜ್ಯೋತಿರಾಜ್‌ ಮಾಡುತ್ತಿದ್ದಾರೆ. ಸ್ವತಃ ತಾವೇ ತರಬೇತಿ ನೀಡಿ ರಾಷ್ಟ್ರಮಟ್ಟಕ್ಕೂ ಕರೆದೊಯ್ದಿದ್ದಾರೆ. ತೀರಾ ಅಪರಿಚಿತವಾಗಿಯೇ ಉಳಿದಿರುವ ಕ್ರೀಡೆಯತ್ತ ಹುರಿದುಂಬಿಸುವ ಕಾಯಕದಲ್ಲಿಯೂ ತಲ್ಲೀನರಾಗಿದ್ದಾರೆ. ಗೋಡೆ ಏರುವ ಕ್ರೀಡೆಯೂ ದೇಹವನ್ನು ಹುರಿಗೊಳಿಸುತ್ತದೆ ಎಂಬುದು ಜ್ಯೋತಿರಾಜ್‌ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.