ADVERTISEMENT

ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿ: ಸಂಜಯ್‌ ಕೈಚಳಕ, ಭಾರತಕ್ಕೆ ಜಯದ ಪುಳಕ

ಪಿಟಿಐ
Published 13 ಅಕ್ಟೋಬರ್ 2019, 19:45 IST
Last Updated 13 ಅಕ್ಟೋಬರ್ 2019, 19:45 IST
   

ಜೋಹರ್‌ ಬಹ್ರು: ಸಂಜಯ್‌ ಅವರ ಆಕರ್ಷಕ ಆಟದ ಬಲದಿಂದ ಭಾರತದ ಜೂನಿಯರ್‌ ಬಾಲಕರ ತಂಡದವರು ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದ್ದಾರೆ.

ಭಾನುವಾರ ನಡೆದ ರೌಂಡ್‌ ರಾಬಿನ್‌ ಲೀಗ್‌ ಹಣಾಹಣಿಯಲ್ಲಿ ಭಾರತ 8–2 ಗೋಲುಗಳಿಂದ ನ್ಯೂಜಿಲೆಂಡ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.

ಮಂಗಳವಾರ ನಡೆಯುವ ಪಂದ್ಯದಲ್ಲಿ ಭಾರತಕ್ಕೆ ಜಪಾನ್‌ ಸವಾಲು ಎದುರಾಗಲಿದೆ.

ADVERTISEMENT

ಮೊದಲ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿಯಾಗಿ ಆಡಿದ ಮನದೀಪ್‌ ಮೋರ್‌ ಬಳಗವು ಎರಡನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್‌ ಪಡೆದಿತ್ತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಭಾರತದ ಆಟಗಾರರಿಗೆ ಆಗಲಿಲ್ಲ. ಆರನೇ ನಿಮಿಷದಲ್ಲಿ ದಿಲ್‌ಪ್ರೀತ್‌ ಸಿಂಗ್‌ ಮೋಡಿ ಮಾಡಿದರು. ಫೀಲ್ಡ್‌ ಗೋಲು ಹೊಡೆದು ತಂಡದ ಖಾತೆ ತೆರೆದರು.

ನಂತರ ಆಟದ ವೇಗ ಹೆಚ್ಚಿಸಿಕೊಂಡ ಭಾರತವು ನ್ಯೂಜಿಲೆಂಡ್‌ ತಂಡವನ್ನು ಒತ್ತಡಕ್ಕೆ ಸಿಲುಕಿಸುವ ಪ್ರಯತ್ನ ಮಾಡಿತು. 14ನೇ ನಿಮಿಷದಲ್ಲಿ ಶಿಲಾನಂದ ಲಾಕ್ರಾ ಗೋಲು ಬಾರಿಸಿದರು. ಇದರ ಬೆನ್ನಲ್ಲೇ ಸಂಜಯ್‌, ಕೈಚಳಕ ತೋರಿದರು. 17ನೇ ನಿಮಿಷದಲ್ಲಿ ಗೋಲು ಗಳಿಸಿದ ಅವರು ತಂಡವು 3–0 ಮುನ್ನಡೆ ಪಡೆಯಲು ನೆರವಾದರು. 22ನೇ ನಿಮಿಷದಲ್ಲಿ ನಾಯಕ ಮನದೀಪ್‌ ಮತ್ತು ಸಂಜಯ್‌ ಅವರು ಬೆನ್ನು ಬೆನ್ನಿಗೆ ಗೋಲುಗಳನ್ನು ಗಳಿಸಿದ್ದರಿಂದ ತಂಡದ ಮುನ್ನಡೆ 5–0ಗೆ ಏರಿತು.

28 ಮತ್ತು 44ನೇ ನಿಮಿಷಗಳಲ್ಲಿ ಗೋಲು ಹೊಡೆದ ಡೈಲನ್‌ ಥಾಮಸ್‌ ನ್ಯೂಜಿಲೆಂಡ್‌ ತಂಡದ ಹಿನ್ನಡೆಯನ್ನು 2–5ಕ್ಕೆ ತಗ್ಗಿಸಿದರು.

ಅಂತಿಮ ಕ್ವಾರ್ಟರ್‌ನಲ್ಲಿ ಸುಮನ್‌ ಬೆಕ್‌ (45ನೇ ನಿಮಿಷ), ಪ್ರತಾಪ್‌ ಲಾಕ್ರಾ (50) ಮತ್ತು ಸುದೀಪ್‌ ಚಿರ್ಮಾಕೊ (51) ತಲಾ ಒಂದು ಗೋಲು ಬಾರಿಸಿ ಭಾರತದ ಗೆಲುವಿನ ಅಂತರವನ್ನು ಹಿಗ್ಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.