ಶೂಟಿಂಗ್
ಲಿಮಾ (ಪೆರು): ಹದಿಹರೆಯದ ಶೂಟರ್ ಸುರುಚಿ ಇಂದರ್ ಸಿಂಗ್ ಅವರು ಮತ್ತೊಮ್ಮೆ ಅಮೋಘ ಗುರಿಯ ಪ್ರದರ್ಶನ ನೀಡಿ, ಐಎಸ್‌ಎಸ್‌ಎಫ್ ವಿಶ್ವಕಪ್‌ನ 10 ಮೀ. ಏರ್ ಪಿಸ್ತೂಲ್‌ನಲ್ಲಿ ಸತತ ಎರಡನೇ ಚಿನ್ನ ಗೆದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ವಿಜೇತೆ ಮನುಭಾಕರ್ ಈ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದುಕೊಳ್ಳುವುದರೊಂದಿಗೆ ಭಾರತ ಪ್ರಾಬಲ್ಯ ಸಾಧಿಸಿತು.
ಝಜ್ಜರ್‌ನವರಾದ 18 ವರ್ಷ ವಯಸ್ಸಿನ ಸುರುಚಿ ಇತ್ತೀಚೆಗಷ್ಟೇ ಅರ್ಜೆಂಟೀನಾದ ಬ್ಯನೊ ಏರ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಇಲ್ಲಿ 24 ಗುರಿಗಳ ಫೈನಲ್‌ನಲ್ಲಿ 243.6 ಪಾಯಿಂಟ್ಸ್ ಗಳಿಸದಿರು. 1.3 ಪಾಯಿಂಟ್ಸ್‌ನಿಂದ ಹಿಂದೆಬಿದ್ದ ಮನು ಬೆಳ್ಳಿ ಗೆದ್ದರು. ಕಂಚಿನ ಪದಕ ಚೀನಾದ ಯಾವೊ ಕ್ವಿಯಾನ್‌ಕ್ಸುನ್ ಪಾಲಾಯಿತು.
ಇದಕ್ಕೆ ಮೊದಲು, ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೌರಭ್ ಚೌಧರಿ ಕಂಚಿನ ಪದಕ ಗೆದ್ದುಕೊಂಡಿದ್ದರು.
ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಮೂರು ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಪುರುಷರ ಏರ್ ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಚೀನಾ ಎರಡನೇ ಸ್ಥಾನದಲ್ಲಿದೆ.
60 ಶಾಟ್‌ಗಳ ಅರ್ಹತಾ ಸುತ್ತಿನಲ್ಲಿ ಸುರುಚಿ (582 ಪಾಯಿಂಟ್) ಎರಡನೇ ಸ್ಥಾನ ಗಳಿಸಿದ್ದರು. ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮನು (578) ನಾಲ್ಕನೇ ಸ್ಥಾನ ಗಳಿಸಿದ್ದರು. ಕಣದಲ್ಲಿದ್ದ ಭಾರತದ ಮೂರನೇ ಸ್ಪರ್ಧಿ ಸೈನ್ಯಮ್ (571) 11ನೇ ಸ್ಥಾನಕ್ಕೆ ಸರಿದರು. ಆದರೆ ಫೈನಲ್‌ನಲ್ಲಿ ಸುರುಚಿ ಒಳ್ಳೆಯ ಲಯದೊಡನೆ ತಮ್ಮ ಪ್ರದರ್ಶನ ಮಟ್ಟವನ್ನು ಉನ್ನತ ಸ್ತರಕ್ಕೇರಿಸಿದರು.
ಸುರುಚಿ, ಇತ್ತೀಚೆಗೆ ಬ್ಯೂಜೊ ಏರ್ಸ್‌ನಲ್ಲಿ ನಡೆದ ವಿಶ್ವಕಪ್ ಮೊದಲ ಹಂತದಲ್ಲಿ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.