ADVERTISEMENT

ಮಣಿಕಾ–ಸತ್ಯನ್‌ಗೆ ಮಿಶ್ರ ಡಬಲ್ಸ್ ಪ್ರಶಸ್ತಿ

ವಿಶ್ವ ಟೇಬಲ್ ಟೆನಿಸ್‌ ಟೂರ್ನಿ: ಒಲಿಂಪಿಕ್ಸ್ ನಿರಾಸೆ ಮರೆತ ಜೋಡಿ

ಪಿಟಿಐ
Published 20 ಆಗಸ್ಟ್ 2021, 13:34 IST
Last Updated 20 ಆಗಸ್ಟ್ 2021, 13:34 IST
ಮಣಿಕಾ ಬಾತ್ರಾ ಹಾಗೂ ಜಿ.ಸತ್ಯನ್– ಎಎಫ್‌ಪಿ ಸಂಗ್ರಹ ಚಿತ್ರ
ಮಣಿಕಾ ಬಾತ್ರಾ ಹಾಗೂ ಜಿ.ಸತ್ಯನ್– ಎಎಫ್‌ಪಿ ಸಂಗ್ರಹ ಚಿತ್ರ   

ಬುಡಾಪೆಸ್ಟ್: ಅಮೋಘ ಆಟವಾಡಿದ ಭಾರತದ ಮಣಿಕಾ ಬಾತ್ರಾಹಾಗೂ ಜಿ.ಸತ್ಯನ್ ವಿಶ್ವ ಟೇಬಲ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು ಹಂಗರಿಯ ಜೋಡಿಯನ್ನು ಮಣಿಸುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅನುಭವಿಸಿದ್ದ ನಿರಾಸೆಯನ್ನು ಮರೆತರು.

ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿಯು 11-9, 9-11, 12-10, 11-6ರಿಂದ ಹಂಗರಿಯ ಡೋರಾ ಮ್ಯಾಡರಾಸ್‌ ಹಾಗೂ ನ್ಯಾಂದೊರ್ ಎಸೆಕಿ ಜೋಡಿಯನ್ನು ಪರಾಭವಗೊಳಿಸಿತು.

ಮಣಿಕಾ ಹಾಗೂ ಸತ್ಯನ್‌ಗೆ ಇದು ಸ್ಮರಣೀಯ ಗೆಲುವಾಗಿದೆ. ಏಕೆಂದರೆ ಈ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಜೊತೆಯಾಗಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ.

ADVERTISEMENT

ಮಣಿಕಾ ಅವರು ಶರತ್ ಕಮಲ್ ಜೊತೆಗೂಡಿ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಇದೇ ಜೋಡಿ ಕಣಕ್ಕಿಳಿದಿತ್ತು.

ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಮಣಿಕಾ ಸೆಮಿಫೈನಲ್‌ಗೂ ತಲುಪಿದ್ದಾರೆ. ಗುರುವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅವರು 7-11, 11-1, 8-11, 13-11, 11-6ರಿಂದ ಭಾರತದವರೇ ಆದ ಶ್ರೀಜಾ ಅಕುಲ್ ವಿರುದ್ಧ ಜಯಿಸಿದ್ದರು.

ಟೋಕಿಯೊ ಒಲಿಂಪಿಕ್ಸ್‌ನ ಸಿಂಗಲ್ಸ್ ವಿಭಾಗದಲ್ಲಿ ಸತ್ಯನ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.