ADVERTISEMENT

ದಾಖಲೆ ಬರೆದ ತಜಿಂದರ್‌ಗೆ ಒಲಿಂಪಿಕ್ಸ್‌ ಟಿಕೆಟ್‌

ಪಿಟಿಐ
Published 21 ಜೂನ್ 2021, 16:07 IST
Last Updated 21 ಜೂನ್ 2021, 16:07 IST
ತಜಿಂದರ್ ಸಿಂಗ್ ತೂರ್ –ರಾಯಿಟರ್ಸ್ ಚಿತ್ರ
ತಜಿಂದರ್ ಸಿಂಗ್ ತೂರ್ –ರಾಯಿಟರ್ಸ್ ಚಿತ್ರ   

ಪಟಿಯಾಲ: ಶಾಟ್‌ಪಟ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದ ತಜಿಂದರ್ ಸಿಂಗ್ ತೂರ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು. ಇಲ್ಲಿ ಸೋಮವಾರ ಆರಂಭಗೊಂಡ ಇಂಡಿಯನ್ ಗ್ರ್ಯಾನ್‌ ಪ್ರಿ ನಾಲ್ಕರಲ್ಲಿ ತೂರ್‌ 21.49 ಮೀಟರ್‌ಗಳ ಸಾಧನೆ ಮಾಡಿದರು. ಈ ಮೂಲಕ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು (20.92 ಮೀ; 2019) ಮುರಿದರು. ಒಲಿಂಪಿಕ್ಸ್‌ ಅರ್ಹತೆಗೆ 21.10 ಮೀಟರ್ಸ್‌ ನಿಗದಿ ಮಾಡಲಾಗಿತ್ತು.

ಮಹಿಳೆಯರ ರಿಲೆ ತಂಡ 43.37 ಸೆಕೆಂಡುಗಳ ಸಾಧನೆಯೊಂದಿಗೆ ದಾಖಲೆ ಬರೆಯಿತು. ಆದರೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವಿಫಲವಾಯಿತು. ಹಿಮಾ ದಾಸ್‌, ದ್ಯುತಿ ಚಾಂದ್‌, ಎಸ್‌.ಧನಲಕ್ಷ್ಮಿ ಮತ್ತು ಅರ್ಚನಾ ಸುಶೀಂದ್ರನ್ ಅವರನ್ನು ಒಳಗೊಂಡ ತಂಡ ಭಾರತ ‘ಬಿ’ ತಂಡವನ್ನು (48.2 ಸೆಕೆಂಡು) ಸೋಲಿಸಿ ಮೆರ್ಲಿನ್ ಜೋಸೆಫ್‌, ಎಚ್‌.ಎಂ.ಜ್ಯೋತಿ, ಶ್ರಬನಿ ನಂದಾ ಮತ್ತು ದ್ಯುತಿ 2016ರಲ್ಲಿ ಮಾಡಿದ ದಾಖಲೆಯನ್ನು (43.42 ಸೆ) ಹಿಂದಿಕ್ಕಿತು. ಮಾಲ್ಡಿವ್ಸ್‌ ಮೂರನೇ ಸ್ಥಾನ ಗಳಿಸಿತು.

ಸ್ಪ್ರಿಂಟರ್ ದ್ಯುತಿ ಚಾಂದ್ 100 ಮೀಟರ್ಸ್ ಓಟದಲ್ಲಿ ದಾಖಲೆ ಮಾಡಿದರು. 11.17 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ತಮ್ಮದೇ ಹೆಸರಿನಲ್ಲಿದ್ದ (11.21 ಸೆ) ದಾಖಲೆ ಮುರಿದರು. ಮಹಿಳೆಯರ ಡಿಸ್ಕಸ್ ಥ್ರೋದಲ್ಲಿ ಕಮಲ್‌ಪ್ರೀತ್ ಕೌರ್ 66.59 ಮೀಟರ್ಸ್ ದೂರ ಎಸೆದು ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.