ADVERTISEMENT

ಚಿನ್ನ ಗೆದ್ದ ಮಗನ ಸಂಭ್ರಮ ಕಾಣಲು ತಂದೆಯೇ ಇರಲಿಲ್ಲ

ಏಜೆನ್ಸೀಸ್
Published 4 ಸೆಪ್ಟೆಂಬರ್ 2018, 20:42 IST
Last Updated 4 ಸೆಪ್ಟೆಂಬರ್ 2018, 20:42 IST
ತೇಜಿಂದರ್‌ ಸಿಂಗ್‌
ತೇಜಿಂದರ್‌ ಸಿಂಗ್‌   

ನವದೆಹಲಿ: ‌ಏಷ್ಯನ್‌ ಕ್ರೀಡಾಕೂಟದಲ್ಲಿ ಶಾಟ್‌ಪುಟ್‌ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ತೇಜಿಂದರ್‌ ಪಾಲ್‌ ಸಿಂಗ್‌ ಅವರಿಗೆ ಆ ಸಂಭ್ರಮ ಬಹಳ ಕಾಲ ಉಳಿಯಲಿಲ್ಲ.

ಕ್ರೀಡಾಕೂಟ ಮುಗಿಸಿ ತಾಯ್ನಡಿಗೆ ಬರುತ್ತಿದ್ದಂತೆ ಅವರ ಕಿವಿಗೆ ಅಪ್ಪಳಿಸಿದ್ದು, ತಂದೆ ಕರಮ್ ಸಿಂಗ್ ಅವರ ಸಾವಿನ ಸುದ್ದಿ. ಪ್ರೀತಿಯ ಅಪ್ಪನಿಗೆ ಚಿನ್ನದ ಪದಕ ಹಾಕಿ ಅವರ ಮೊಗದಲ್ಲಿ ಸಂಭ್ರಮ ಕಾಣಬೇಕೆಂದಿದ್ದ ಅವರ ಆಸೆ, ಕನಸಾಗಿಯೇ ಉಳಿಯಿತು.

ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ತೇಜಿಂದರ್ ತಂದೆಯ ನಿಧನದ ಬಗ್ಗೆ ಟ್ವೀಟ್ ಮಾಡಿದ್ದು, ‘ಈ ಸುದ್ದಿ ಕೇಳಿ ಆಘಾತವಾಗಿದೆ. ಈಗಷ್ಟೇ ತೇಜಿಂದರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದೆವು. ಇದೇ ಸಂದರ್ಭದಲ್ಲಿ ಅವರ ತಂದೆ ನಿಧನದ ಸುದ್ದಿ ಕೂಡಾ ಬಂದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದೆ.

ADVERTISEMENT

‘ಈ ಕ್ರೀಡಾಕೂಟದಲ್ಲಿ ಪಡೆದ ಚಿನ್ನದ ಪದಕ ನನ್ನ ಜೀವನದ ಅತೀ ದೊಡ್ಡ ಸಾಧನೆ. ತಂದೆ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇಂತಹ ಸಂದರ್ಭದಲ್ಲೂ ನನ್ನ ಕುಟುಂಬದವರು ಸಾಧನೆಗೆ ಅವಕಾಶ ಮಾಡಿಕೊಟ್ಟಿದ್ದರು. ನನ್ನ ಕುಟುಂಬ ನನಗಾಗಿ ಸಾಕಷ್ಟು ತ್ಯಾಗ ಮಾಡಿದೆ. ಈ ಪದಕ ಅವರ ಶ್ರಮ, ಪ್ರೀತಿಗೆ ಅರ್ಪಣೆ’ ಎಂದು ತೇಜಿಂದರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಶಾಟ್‌ಪಟ್‌ ಸ್ಪರ್ಧಿ ತೇಜಿಂದರ್‌ ಹೋದ ವರ್ಷ ನಡೆದಿದ್ದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ಕಬ್ಬಿಣದ ಗುಂಡನ್ನು 19.77 ಮೀಟರ್ಸ್‌ ದೂರ ಎಸೆದು ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.