ADVERTISEMENT

ಪ್ರೊ ಕಬಡ್ಡಿ ಲೀಗ್: ತಲೈವಾಸ್‌, ಪ್ಯಾಂಥರ್ಸ್‌ಗೆ ಗೆಲುವು

ಮಂಜೀತ್ ‘ಸೂಪರ್ 10’ ಮಿಂಚು; ಸುರ್ಜೀತ್ ಸಿಂಗ್–ಸಾಗರ್‌ ‘ಹೈ ಫೈವ್‌‘ ಸಾಧನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 2:47 IST
Last Updated 11 ಜನವರಿ 2022, 2:47 IST
ತಮಿಳ್‌ ತಲೈವಾಸ್ ತಂಡದ ಮಂಜೀತ್‌ ಅವರು ಪಾಯಿಂಟ್ ಗಳಿಸಲು ಪ್ರಯತ್ನಿಸಿದರು
ತಮಿಳ್‌ ತಲೈವಾಸ್ ತಂಡದ ಮಂಜೀತ್‌ ಅವರು ಪಾಯಿಂಟ್ ಗಳಿಸಲು ಪ್ರಯತ್ನಿಸಿದರು   

ಬೆಂಗಳೂರು: ಆಲ್‌ರೌಂಡ್ ಆಟವಾಡಿದ ತಮಿಳ್ ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೋಮವಾರ ಭರ್ಜರಿ ಜಯ ಗಳಿಸಿತು. ವೈಟ್‌ಫೀಲ್ಡ್‌ನ ಹೋಟೆಲ್ ಶೆರಟಾನ್ ಗ್ರ್ಯಾಂಡ್‌ನಲ್ಲಿ ನಡೆದ ಹಣಾಹಣಿಯಲ್ಲಿ ತಮಿಳ್ ತಲೈವಾಸ್‌, ಹರಿಯಾಣ ಸ್ಟೀಲರ್ಸ್‌ ತಂಡವನ್ನು 45–26ರಲ್ಲಿ ಮಣಿಸಿತು.

ರೇಡರ್‌ ಮಂಜೀತ್ ಸೂಪರ್ 10 ಮೂಲಕ ಮಿಂಚಿದರೆ ರಕ್ಷಣಾ ವಿಭಾಗದ ಇಬ್ಬರು ಸಮರ್ಥ ಆಟಗಾರರಾದ ಸುರ್ಜೀತ್ ಸಿಂಗ್ ಮತ್ತು ಸಾಗರ್‌ ಅವರು ‘ಹೈ ಫೈವ್‌‘ ಸಾಧನೆ ಮಾಡಿದರು. ಇವರಿಬ್ಬರೂ ಕ್ರಮವಾಗಿ 8 ಮತ್ತು 7 ಪಾಯಿಂಟ್ ಕಲೆ ಹಾಕಿದರು.

ಮೊದಲಾರ್ಧದಲ್ಲೇ ತಮಿಳ್‌ ತಲೈವಾಸ್ ಬಿಗಿ ಹಿಡಿತ ಸಾಧಿಸಿತ್ತು. 10 ರೇಡಿಂಗ್ ಪಾಯಿಂಟ್ ಮತ್ತು 9 ಟ್ಯಾಕ್ಲಿಂಗ್ ಪಾಯಿಂಟ್‌ಗಳೊಂದಿಗೆ ತಂಡ 24–18ರ ಮುನ್ನಡೆ ಸಾಧಿಸಿತು. ಸುರ್ಜೀತ್ ಮತ್ತು ಸಾಗರ್ ಮೋಹಕ ಟ್ಯಾಕ್ಲಿಂಗ್ ಮೂಲಕ ಮೊದಲ 5 ನಿಮಿಷಗಳಲ್ಲೇ ಎದುರಾಳಿ ತಂಡವನ್ನು ಆಲ್‌ಔಟ್ ಮಾಡಲು ನೆರವಾದರು. ಮೊದಲಾರ್ಧದ ಮುಕ್ತಾಯಕ್ಕೆ 8 ನಿಮಿಷಗಳು ಉಳಿದಿರುವಾಗ ಹರಿಯಾಣ ಮತ್ತೊಮ್ಮೆ ಆಲೌಟಾಯಿತು. ನಂತರ ವಿಕಾಸ್ ಖಂಡೋಲಾ ಅವರ ಆಟದ ಮೂಲಕ ತಮಿಳ್ ತಲೈವಾಸ್ ಕೂಡ ಆಲೌಟಾಯಿತು.

ADVERTISEMENT

ದ್ವಿತೀಯಾರ್ಧದಲ್ಲೂ ತಲೈವಾಸ್ ಆಧಿಪತ್ಯ ಮುಂದುವರಿಸಿತು. ಮೂರನೇ ನಿಮಿಷದಲ್ಲೇ ಎದುರಾಳಿಗಳ ಅಂಗಣ ಖಾಲಿಯಾಯಿತು. ಪಂದ್ಯದ ಮುಕ್ತಾಯಕ್ಕೆ 5 ನಿಮಿಷಗಳು ಇರುವಾಗ ಸ್ಟೀಲರ್ಸ್ ಅಂಗಣ ಮತ್ತೊಮ್ಮೆ ಖಾಲಿಯಾಯಿತು. ಹೀಗಾಗಿ ತಲೈವಾಸ್ ಜಯ ಖಚಿತವಾಯಿತು.

ಜೈಪುರಕ್ಕೆ ರೋಚಕ ಗೆಲುವು
ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ 30–28ರಲ್ಲಿ ದಬಂಗ್ ಡೆಲ್ಲಿಯನ್ನು ಮಣಿಸಿತು. ದೀಪಕ್ ಹೂಡಾ (9 ಪಾಯಿಂಟ್‌), ಸಾಹುಲ್ ಕುಮಾರ್ (8 ಪಾಯಿಂಟ್‌) ಮತ್ತು ಅರ್ಜುನ್ ದೇಶ್ವಾಲ್ (7 ಪಾಯಿಂಟ್‌) ಜೈಪುರ್ ಪರವಾಗಿ ಮಿಂಚಿದರೆ ಡೆಲ್ಲಿಗಾಗಿ ಆಶು ಮಲಿಕ್ 8, ನವೀನ್ ಕುಮಾರ್ 7 ಮತ್ತು ಮಂಜೀಗ್ ಚಿಲ್ಲಾರ್ 4 ಪಾಯಿಂಟ್ ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.