ಝೂಲ್ (ಜರ್ಮನಿ): ಭಾರತ ತೇಜಸ್ವಿನಿ, ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಸ್ಮರಣೀಯ ಪ್ರದರ್ಶನ ನೀಡಿ ಚಿನ್ನ ಗೆದ್ದುಕೊಂಡರು. ಆ ಮೂಲಕ ಭಾರತ ಪದಕಪಟ್ಟಿಯಲ್ಲಿ ಚೀನಾವನ್ನು ಹಿಂದೆಹಾಕಿ ಅಗ್ರಸ್ಥಾನ ಪಡೆಯಲು ನೆರವಾದರು.
ಹರಿಯಾಣದ 20 ವರ್ಷ ವಯಸ್ಸಿನ ತೇಜಸ್ವಿನಿ ಅವರಿಗೆ ಇದು ವಿಶ್ವಕಪ್‌ನಲ್ಲಿ ಮೊದಲ ವೈಯಕ್ತಿಕ ಪದಕವಾಗಿದೆ. ಭಾರತ ಈ ಕೂಟದಲ್ಲಿ ಗೆದ್ದ 11ನೇ ಪದಕ ಸಹ. ತನ್ಮೂಲಕ ಭಾರತ ಈ ಕೂಟದಲ್ಲಿ ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಡನೆ ಅಭಿಯಾನ ಪೂರೈಸಿತು.
ಚೀನಾ ಸಹ ಮೂರು ಚಿನ್ನ ಗೆದ್ದರೂ, ಆ ತಂಡಕ್ಕೆ ಒಂದು ಕಂಚಿನ ಪದಕ ಮಾತ್ರ ಇತ್ತು.
ಅಲಿನಾ ನೆಸ್ಟ್‌ಸಿಯಾರೊವಿಚ್ (ವೈಯಕ್ತಿಕ ತಟಸ್ಥ ಅಥ್ಲೀಟ್) ಅವರು ಬೆಳ್ಳಿ ಹಾಗೂ ಹಂಗೆರಿಯ ಮಮಿರಿಯಮ್ ಜಾಕೊ ಕಂಚಿನ ಪದಕ ಗೆದ್ದರು.
ಈ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಕಣದಲ್ಲಿದ್ದರೂ, ಫೈನಲ್ ತಲುಪಿದ ಅಗ್ರ ಎಂಟರಲ್ಲಿ ತೇಜಸ್ವಿನಿ ಮಾತ್ರ ಸ್ಥಾನ ಪಡೆದರು.
ಇದರೊಂದಿಗೆ ಈ ವಿಶ್ವಕಪ್ ಸೇರಿ ಕೊನೆಯ ಐದು ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಕೂಟಗಳಲ್ಲಿ ಭಾರತ ನಾಲ್ಕರಲ್ಲಿ ಅಗ್ರಸ್ಥಾನ ಗಳಿಸಿದಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.