ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಆಡಲಿರುವ ಭಾರತದ ಪುರುಷರ ಹಾಕಿ ತಂಡವನ್ನು ಶುಕ್ರವಾರ ಪ‍್ರಕಟಿಸಲಾಗಿದ್ದು, 10 ಮಂದಿ ಆಟಗಾರರು ಇದೇ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ. ಜುಲೈ 23ರಿಂದ ಆಗಸ್ಟ್ ಆಗಸ್ಟ್ 8ರವರೆಗೆ ನಡೆಯಲಿರುವ ಟೋಕಿಯೊ ಕೂಟಕ್ಕೆ ಅನುಭವಿಗಳಾದ ಪಿ.ಆರ್.ಶ್ರೀಜೇಶ್ ಹಾಗೂ ಮನ್‌ಪ್ರೀತ್ ಸಿಂಗ್ ಕೂಡ ತೆರಳಲಿದ್ದಾರೆ. ಕರ್ನಾಟಕದ ಎಸ್.ವಿ.ಸುನಿಲ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
ಅಮಿತ್ ರೋಹಿದಾಸ್, ಹಾರ್ದಿಕ್ ಸಿಂಗ್, ವಿವೇಕ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಸುಮಿತ್, ಶಂಶೇರ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಲಲಿತ್ ಕುಮಾರ್ ಉಪಾಧ್ಯಾಯ ತಂಡದಲ್ಲಿರುವ ಹೊಸಬರು.
ತಂಡಕ್ಕೆ ನಾಯಕನನ್ನು ಹೆಸರಿಸಿಲ್ಲ. ಆದರೆ ಮನ್‌ಪ್ರೀತ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಮನ್‌ಪ್ರೀತ್ ಸಿಂಗ್, ಪಿ.ಆರ್.ಶ್ರೀಜೇಶ್, ಅನುಭವಿಗಳಾದ ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್ ಮತ್ತು ಮನದೀಪ್ ಸಿಂಗ್ ಕೂಡ ಸ್ಥಾನ ಗಿಟ್ಟಿಸಿದ್ದಾರೆ. ಇವರೆಲ್ಲರೂ 2016ರ ರಿಯೊ ಡಿ ಜನೈರೊ ಕೂಟದಲ್ಲಿ ಆಡಿದ್ದರು. ಬೀರೇಂದ್ರ ಲಾಕ್ರಾ ಅವರು ಮೊಣಕಾಲು ಗಾಯದ ಕಾರಣ ರಿಯೊ ಒಲಿಂಪಿಕ್ಸ್‌ನಲ್ಲಿ ಆಡಿರಲಿಲ್ಲ. ಅವರೂ ತಂಡಕ್ಕೆ ಆಯ್ಕೆಯಾಗಿದ್ದು, ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಲಿದ್ದಾರೆ.
ಶ್ರೀಜೇಶ್ ತಂಡದಲ್ಲಿರುವ ಏಕೈಕ ಗೋಲ್‌ಕೀಪರ್. ಕೃಷ್ಣ ಬಹಾದ್ದೂರ್ ಪಾಠಕ್ ಅವರನ್ನು ಪರಿಗಣಿಸಲಾಗಿಲ್ಲ. ರಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಆಕಾಶದೀಪ್ ಸಿಂಗ್ ಹಾಗೂ ರಮಣದೀಪ್ ಸಿಂಗ್ ಅವರನ್ನೂ ಹೊರಗಿಡಲಾಗಿದೆ.
ಭಾರತ ತಂಡ ಇದುವರೆಗೆ ಒಲಿಂಪಿಕ್ಸ್‌ನಲ್ಲಿ ಎಂಟು ಬಾರಿ ಚಿನ್ನದ ಪದಕ ಗೆದ್ದಿದೆ. ಆದರೆ 1980ರ ಮಾಸ್ಕೊ ಕೂಟದ ಬಳಿಕ ಪದಕ ಮರೀಚಿಕೆಯಾಗಿದೆ. ಈ ಬಾರಿ ಆ ಬರವನ್ನು ನೀಗಿಸುವ ಹಂಬಲ ತಂಡಕ್ಕಿದೆ.
ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳುಸದ್ಯ ಬೆಂಗಳೂರಿನಲ್ಲಿರುವ ಸಾಯ್ ಕೇಂದ್ರದಲ್ಲಿ ತರಬೇತಿಯಲ್ಲಿ ನಿರತವಾಗಿವೆ.
ತಂಡ ಇಂತಿದೆ: ಗೋಲ್‌ಕೀಪರ್: ಪಿ.ಆರ್.ಶ್ರೀಜೇಶ್.
ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರಾ.
ಮಿಡ್‌ಫೀಲ್ಡರ್ಸ್:ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಂಕಂಠ ಶರ್ಮಾ, ಸುಮಿತ್.
ಫಾರ್ವರ್ಡ್ಸ್: ಶಂಶೇರ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನದೀಪ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.