ADVERTISEMENT

ಟೆನ್‌ಪಿನ್‌ ಬೌಲಿಂಗ್‌ ಬೆಂಗಳೂರೇ ‘ಶಕ್ತಿ ಕೇಂದ್ರ’...

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 19:45 IST
Last Updated 10 ಫೆಬ್ರುವರಿ 2019, 19:45 IST
ಹಿರಿಯ ಆಟಗಾರ್ತಿ ನಮ್ರತಾ ಕಾರಂತ್‌
ಹಿರಿಯ ಆಟಗಾರ್ತಿ ನಮ್ರತಾ ಕಾರಂತ್‌   

ಯುರೋಪ್‌ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಟೆನ್‌ಪಿನ್‌ ಬೌಲಿಂಗ್‌ ಕ್ರೀಡೆ ಈಗ ಭಾರತದಲ್ಲೂ ಸದ್ದು ಮಾಡುತ್ತಿದೆ. ಯುವಕರು ಇದನ್ನು ವೃತ್ತಿಪರವಾಗಿ ಸ್ವೀಕರಿಸಲು ಮುಂದಾಗುತ್ತಿದ್ದಾರೆ. ಏಷ್ಯಾ, ಕಾಮನ್‌ವೆಲ್ತ್‌ ಸೇರಿದಂತೆ ಹಲವು ಕೂಟಗಳು ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದ ಸ್ಪರ್ಧಿಗಳು ಪದಕಗಳಿಗೆ ಮುತ್ತಿಕ್ಕುತ್ತಿದ್ದಾರೆ. ದೇಶದಲ್ಲಿ ಈ ಕ್ರೀಡೆಯ ಬೇರುಗಳು ಆಳಕ್ಕಿಳಿಯುತ್ತಿರುವುದಕ್ಕೆ ಇದು ನಿದರ್ಶನ.

ಕರ್ನಾಟಕದಲ್ಲೂ ಈ ಕ್ರೀಡೆಯ ಕಂಪು ಪಸರಿಸಿದ್ದು, ಉದ್ಯಾನ ನಗರಿ ಬೆಂಗಳೂರು ಟೆನ್‌ಪಿನ್‌ ಬೌಲಿಂಗ್‌ನ ‘ಶಕ್ತಿಕೇಂದ್ರ’ವಾಗಿ ಗುರುತಿಸಿಕೊಂಡಿದೆ. ವಿಜಯ್‌ ಪಂಬಾಬಿ, ಗಿರೀಶ್‌ ಗಾಬಾ, ಪರ್ವೇಜ್‌ ಅಹ್ಮದ್‌, ಆಕಾಶ್‌ ಅಶೋಕ್‌ ಕುಮಾರ್‌, ಪ್ರತಿಮಾ ಹೆಗ್ಡೆ, ಜೂಡಿ ಆಲ್ಬನ್‌, ಆರ್‌.ಚೇತನಾ ಹೀಗೆ ಅನೇಕರು ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಇವರ ಸಾಧನೆಯಿಂದ ಪ್ರೇರಣೆ ಪಡೆದ ಹಲವರು ಎತ್ತರದ ಸಾಧನೆ ಮಾಡುವ ಕನಸಿನೊಂದಿಗೆ ಈ ಕ್ರೀಡೆಗೆ ಅಡಿ ಇಡುತ್ತಿದ್ದಾರೆ.

1999–2000ರ ಮಾತು.ಆಗ ಬೆಂಗಳೂರಿನಲ್ಲಿ ಎರಡೇ ಮಾಲ್‌ಗಳಲ್ಲಿ ಟೆನ್‌ಪಿನ್‌ ಬೌಲಿಂಗ್‌ ‘ವಾಲಿ’ಗಳಿದ್ದವು. ಅಲ್ಲಿಗೆ ಹೋಗಿ ಗಂಟೆಗೆ ಇಂತಿಷ್ಟು ಹಣ ನೀಡಿ ಆಡುವವರ ಸಂಖ್ಯೆ ತೀರಾ ವಿರಳವಾಗಿತ್ತು. ಸಾಮಾನ್ಯರಿಗೆ ಈ ಕ್ರೀಡೆಯ ಪರಿಚಯವೇ ಇರಲಿಲ್ಲ. 2003ರಲ್ಲಿ ಕರ್ನಾಟಕ ರಾಜ್ಯ ಟೆನ್‌ಪಿನ್‌ ಬೌಲಿಂಗ್‌ ಸಂಸ್ಥೆ (ಕೆಎಸ್‌ಟಿಬಿ) ಅಸ್ತಿತ್ವಕ್ಕೆ ಬಂದ ನಂತರ ಪರಿಸ್ಥಿತಿ ಕೊಂಚ ಸುಧಾರಿಸಿತು. ಈ ಕ್ರೀಡೆಯ ಬೆಳವಣಿಗೆ ವೇಗ ಪಡೆದುಕೊಂಡಿತು. ಆರಂಭದಲ್ಲಿ ರಾಜ್ಯದಲ್ಲಿ 40 ವೃತ್ತಿಪರ ಬೌಲರ್‌ಗಳಿದ್ದರು. 2010ರ ಹೊತ್ತಿಗೆ ಈ ಸಂಖ್ಯೆ 140ಕ್ಕೆ ಹೆಚ್ಚಿತು. ಈಗ ಇದು ದುಪ್ಪಟ್ಟಾಗಿದೆ. ಕೆಎಸ್‌ಟಿಬಿಯ ಕಾರ್ಯಕ್ಕೆ ಭಾರತ ಟೆನ್‌ಪಿನ್‌ ಬೌಲಿಂಗ್‌ ಫೆಡರೇಷನ್‌ (ಟಿಬಿಎಫ್‌ಐ) ಕೂಡಾ ಕೈ ಜೋಡಿಸಿದೆ.

ADVERTISEMENT

ಶಾಲಾ, ಕಾಲೇಜಿನ ವಿದ್ಯಾರ್ಥಿಗಳನ್ನು ಈ ಕ್ರೀಡೆಯತ್ತ ಸೆಳೆಯುವ ಉದ್ದೇಶದಿಂದ ಕೆಎಸ್‌ಟಿಬಿಯು ಟಿಬಿಎಫ್‌ಐ ಸಹಯೋಗದಲ್ಲಿ ಅಂತರ ಶಾಲಾ ಮತ್ತು ಅಂತರ ಕಾಲೇಜು ಟೂರ್ನಿಗಳನ್ನು ಹಮ್ಮಿಕೊಳ್ಳುತ್ತಿದೆ. ಜೂನಿಯರ್‌ ವಿಭಾಗದ ಟೂರ್ನಿಗಳನ್ನು ಆಯೋಜಿಸುವ ಮೂಲಕ ಪ್ರತಿಭಾನ್ವಿತರನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡುವ ಕಾರ್ಯಕ್ಕೆ ಮುಂದಾಗಿದೆ.

‘ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ಈಗ ಕರ್ನಾಟಕದಲ್ಲಿ ಟೆನ್‌ಪಿನ್‌ ಬೌಲಿಂಗ್‌ ಹೆಚ್ಚು ಜನಪ್ರಿಯವಾಗುತ್ತಿದೆ. ಯುವಕರು ಈ ಕ್ರೀಡೆಯತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ವೃತ್ತಿಪರರ ಸಂಖ್ಯೆಯೂ ಏರುಮುಖವಾಗಿದೆ. ತಾಂತ್ರಿಕವಾಗಿ ನಮ್ಮ ಬೌಲರ್‌ಗಳು ಸಾಕಷ್ಟು ಪಳಗಿದ್ದಾರೆ. ಚೆಂಡನ್ನು ಸ್ಪಿನ್‌ ಮಾಡುವುದೂ ಸೇರಿದಂತೆ ಹಲವು ನವೀನ ಕೌಶಲಗಳನ್ನು ಮೈಗೂಡಿಸಿಕೊಂಡಿದ್ದಾರೆ. ರಾಜ್ಯ ಸಂಸ್ಥೆಯು, ಅಮೆಚೂರ್ ಮತ್ತು ಓಪನ್‌ ಟೂರ್ನಿಗಳನ್ನು ಹೆಚ್ಚಾಗಿ ನಡೆಸುತ್ತಿದೆ. ಕರ್ನಾಟಕದಲ್ಲೇ ರಾಷ್ಟ್ರೀಯ ಶಿಬಿರಗಳೂ ನಡೆಯುತ್ತವೆ. ಜೊತೆಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳೂ ಸತತವಾಗಿ ಆಯೋಜನೆಯಾಗುತ್ತಿವೆ. ಹೀಗಾಗಿ ಎಲ್ಲರಿಗೂ ಈ ಕ್ರೀಡೆ ಪರಿಚಿತವಾಗುತ್ತಿದೆ’ ಎಂದು ಕರ್ನಾಟಕದ ಆಟಗಾರ ಆಕಾಶ್‌ ಅಶೋಕ್‌ ಕುಮಾರ್‌ ಹೇಳುತ್ತಾರೆ.

ಕೆಎಸ್‌ಟಿಬಿ, ತಿಂಗಳಿಗೊಂದು ಟೂರ್ನಿ ಆಯೋಜಿಸುವ ಜೊತೆಗೆ ಬೆಂಗಳೂರಿನ ಪ್ರಮುಖ ಮಾಲ್‌ಗಳಲ್ಲಿ ವಾರಾಂತ್ಯದಲ್ಲಿ ರಿಯಾಯಿತಿ ದರದಲ್ಲಿ ಟೆನ್‌ಪಿನ್‌ ಆಡುವ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲೂ ಸಾಕಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಅವರಿಗಾಗಿಯೇ ರಾಜ್ಯ ಸಂಸ್ಥೆಯು ಓಪನ್‌ ಟೂರ್ನಿಗಳನ್ನು ಆಯೋಜಿಸುತ್ತಿದೆ. ಆ ಮೂಲಕ ಪ್ರತಿಭಾನ್ವೇಷಣೆಗೆ ಕೈಹಾಕಿದೆ. ಇವರಿಗೆ ತರಬೇತಿ ಸೇರಿದಂತೆ ಎಲ್ಲಾ ರೀತಿಯ ನೆರವು ಕೂಡಾ ನೀಡುತ್ತಿದೆ. ಟೂರ್ನಿಗಳು ಇದ್ದಾಗ ಈ ಭಾಗದ ‘ಬೌಲರ್‌ಗಳು’ ಸಾಕಷ್ಟು ಮುಂಚಿತವಾಗಿಯೇ ಬೆಂಗಳೂರಿಗೆ ಬರುತ್ತಾರೆ. ಅವರಿಗೆ ಇಲ್ಲಿ ಅಭ್ಯಾಸಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದು ಕೂಡಾ ಕ್ರೀಡೆಯ ಬೆಳವಣಿಗೆಗೆ ನೆರವಾಗಿದೆ. ಈ ಮಾತನ್ನು ಆಕಾಶ್‌ ಕೂಡಾ ಒಪ್ಪುತ್ತಾರೆ.

ಭಾರತದ ಅಗ್ರ ಆರು ಮಂದಿ ಬೌಲರ್‌ಗಳಲ್ಲಿ ನಾಲ್ಕು ಮಂದಿ ಕರ್ನಾಟಕದವರಿದ್ದಾರೆ. ಆರ್‌.ಕಿಶನ್‌, ಪರ್ವೇಜ್‌ ಅಹ್ಮದ್‌, ನಿಸಾಮ್‌, ಸಲ್ಮಾನ್‌, ಪ್ರತ್ಯೇಕ್‌ ಸತ್ಯ ಅವರಂತಹ ಯುವಕರು ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಮಿಂಚುತ್ತಿದ್ದಾರೆ.

‘ಈ ಕ್ರೀಡೆಯಲ್ಲಿ ಭಾರವಾದ ಚೆಂಡುಗಳನ್ನು ಎತ್ತಬೇಕು. ಹೀಗಿದ್ದರೂ ಮಹಿಳೆಯರು ಕೂಡಾ ಇದನ್ನು ವೃತ್ತಿಪರವಾಗಿ ಸ್ವೀಕರಿಸುತ್ತಿದ್ದಾರೆ. ಅವರಿಗಾಗಿ ಅಮೆಚೂರ್‌ ಟೂರ್ನಿ ಮತ್ತು ರಾಜ್ಯ ಚಾಂಪಿಯನ್‌ಷಿಪ್‌ಗಳನ್ನು ನಡೆಸಲಾಗುತ್ತಿದೆ. ಜೂಡಿ ಆಲ್ಬನ್‌, ಚೇತನಾ, ಪವಿತ್ರಾ ಅವರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು, ಪುರುಷರ ಜೊತೆಗೆ ಅಭ್ಯಾಸ ಮಾಡುತ್ತಾರೆ. ರಾಜ್ಯ ತಂಡಕ್ಕೆ ಕೋಚ್ ಅಂತ ಯಾರೂ ಇಲ್ಲ. ವಿಜಯ್‌ ಪಂಜಾಬಿ ಅವರಂತಹ ಹಿರಿಯರು ಯುವಕರಿಗೆ ಆಟದ ಪಾಠಗಳನ್ನು ಹೇಳಿಕೊಡುತ್ತಾರೆ. ನಾವು ಕೂಡಾ ಅಗತ್ಯ ಸಲಹೆಗಳನ್ನು ನೀಡುತ್ತೇವೆ. ರಾಷ್ಟ್ರೀಯ ಕೋಚ್‌ ಆ್ಯಂಡ್ರ್ಯೂ ಫ್ರೇವ್ಲೆ ಬೆಂಗಳೂರಿನಲ್ಲೇ ಇರುತ್ತಾರೆ. ಅವರೂ ಅಗತ್ಯ ಮಾರ್ಗದರ್ಶನ ನೀಡುತ್ತಾರೆ’ ಎಂದು ಆಕಾಶ್‌ ನುಡಿಯುತ್ತಾರೆ.

ಹೋದ ವಾರ ಬೆಂಗಳೂರಿನ ಅಮೀಬಾ ಕೇಂದ್ರದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆದಿತ್ತು. ಇದರಲ್ಲಿ ರಾಜ್ಯದ ಏಳು ಮಂದಿ ‘ಬೌಲರ್‌’ಗಳು ಭಾಗವಹಿಸಿದ್ದರು. ಆಕಾಶ್‌ ಮತ್ತು ಪ್ರತ್ಯೇಕ್‌ ಸತ್ಯ ಮಿಂಚಿದ್ದರು. ಕರ್ನಾಟಕವು ಈ ಕ್ರೀಡೆಯಲ್ಲಿ ಹೊಂದಿರುವ ಪ್ರಭುತ್ವಕ್ಕೆ ಇದು ಕೈಗನ್ನಡಿ.

ಟೆನ್‌ಪಿನ್‌ ಕ್ರೀಡೆಯ ಬಗ್ಗೆ

ಹದಿನೆಂಟನೇ ಶತಮಾನದಲ್ಲಿ ಯುರೋಪ್‌ನಲ್ಲಿ ಈ ಕ್ರೀಡೆ ಪರಿಚಿತವಾಯಿತು. ನ್ಯೂ ಇಂಗ್ಲೆಂಡ್‌ನಲ್ಲಿ ಇದನ್ನು ‘ಟೆನ್‌ ಪಿನ್‌ ಬೌಲಿಂಗ್‌’ ಮತ್ತು ‘ಬಿಗ್‌ ಬಾಲ್‌ ಬೌಲಿಂಗ್‌’ ಎಂದು ಕರೆಯಲಾಗುತ್ತಿತ್ತು. ಕೆನಡಾ, ಅಮೆರಿಕ, ಬ್ರಿಟನ್‌, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ‘ಬೌಲಿಂಗ್‌’ ಎಂದು ಹೆಸರಿಸಲಾಗುತ್ತಿತ್ತು. 1940ರ ಬಳಿಕ ಇತರ ರಾಷ್ಟ್ರಗಳಿಗೂ ಈ ಕ್ರೀಡೆಯ ಕಂಪು ಪಸರಿಸಿತು.

ಟೆನ್‌ಪಿನ್‌ ಬೌಲಿಂಗ್‌ ಅನ್ನು 153 ಸೆಂಟಿ ಮೀಟರ್‌ ಅಗಲ, 10 ಮೀಟರ್‌ ಉದ್ದದ ಸಿಂಥೆಟಿಕ್‌ ಲೇನ್‌ನಲ್ಲಿ ಆಡಲಾಗುತ್ತದೆ. ಇದು ಸಂಪೂರ್ಣ ಯಾಂತ್ರೀಕೃತವಾಗಿರುತ್ತದೆ.

ಲೇನ್‌ನ ಆರಂಭಿಕ ತುದಿಯಿಂದ ‘ಬೌಲರ್‌’ ಚೆಂಡನ್ನು ಉರುಳಿಸಿ ಅಂತಿಮ ತುದಿಯಲ್ಲಿರುವ ತ್ರಿಕೋನಾಕಾರದ ಹತ್ತು ಪಿನ್‌ಗಳನ್ನು ಬೀಳಿಸಬೇಕು. ‘ಬೌಲರ್‌ಗಳು’, ಬೆರಳುಗಳಿಂದ ಬಿಗಿಯಾಗಿ ಹಿಡಿದು ಸರಾಗವಾಗಿ ಗುರಿಯೆಡೆಗೆ ಉರುಳಿಸಲು ನೆರವಾಗಲಿ ಎಂಬ ಉದ್ದೇಶದಿಂದ ವಿವಿಧ ತೂಕದ ಚೆಂಡುಗಳ ಮೇಲೆ ಮೂರು ಸಂದಿಗಳನ್ನು ಮಾಡಲಾಗಿರುತ್ತದೆ.

ಚೆಂಡನ್ನು ಗುರಿಯತ್ತ ಉರುಳಿಸಿದ ಬಳಿಕ ‘ಬೌಲರ್‌’ ಲೇನ್‌ನ ಶುರುವಿನಲ್ಲಿ ಇರುವ ಗೆರೆಯನ್ನು ದಾಟುವಂತಿಲ್ಲ. ಒಂದೊಮ್ಮೆ ಗೆರೆ ದಾಟಿದರೆ ಅದನ್ನು ‘ಫೌಲ್‌’ ಎಂದು ಪರಿಗಣಿಸಲಾಗುತ್ತದೆ. ಈ ಅವಕಾಶದಲ್ಲಿ ‘ಪಿನ್‌’ಗಳನ್ನು ಬೀಳಿಸಿದರೂ ‘ಸ್ಕೋರ್‌’ ಅನ್ನು ಪರಿಗಣಿಸಲಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.