ADVERTISEMENT

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಎಂಟರ ಘಟ್ಟಕ್ಕೆ ಕಿರಣ್‌, ಲಕ್ಷ್ಯ

ಪಿಟಿಐ
Published 1 ಜೂನ್ 2023, 20:48 IST
Last Updated 1 ಜೂನ್ 2023, 20:48 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌    

ಬ್ಯಾಂಕಾಕ್‌: ಯಶಸ್ಸಿನ ಓಟ ಮುಂದುವರಿಸಿರುವ ಭಾರತದ ಕಿರಣ್‌ ಜಾರ್ಜ್‌, 26ನೇ ಕ್ರಮಾಂಕದ ಚೀನಾ ಆಟಗಾರ ವೆಂಗ್‌ ಹಾಂಗ್‌ ಯಾಂಗ್‌ ಅವರನ್ನು ಗುರುವಾರ ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಭಾರತದ ಲಕ್ಷ್ಯ ಸೇನ್‌ ಕೂಡ ಎಂಟರ ಘಟ್ಟಕ್ಕೆ ಮುನ್ನಡೆದರು.

ವಿಶ್ವ ಕ್ರಮಾಂಕದಲ್ಲಿ 59ನೇ ಸ್ಥಾನದಲ್ಲಿರುವ ಕಿರಣ್‌, ತಮಗಿಂತ ಮೇಲಿನ ಕ್ರಮಾಂಕದ ವೆಂಗ್‌ ಅವರನ್ನು 21–11, 21–19 ರಿಂದ ಸೋಲಿಸಲು 39 ನಿಮಿಷ ತೆಗೆದುಕೊಂಡರು. ಆ ಮೂಲಕ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಸೂಪರ್‌ 500 ಟೂರ್ನಿಯೊಂದರಲ್ಲಿ ಇದೇ ಮೊದಲ ಬಾರಿ ಎಂಟರ ಘಟ್ಟ ತಲುಪಿದಂತಾಯಿತು.

ಲಕ್ಷ್ಯ ಸೇನ್ ಇನ್ನೊಂದು ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಚೀನಾದ ಲಿ ಷಿ ಫೆಂಗ್‌ ಅವರನ್ನು 21–17, 21–15 ರಿಂದ ಪರಾಭವಗೊಳಿಸಿದರು.

ADVERTISEMENT

ಸೈನಾ, ಅಶ್ಮಿತಾಗೆ ಸೋಲು: ಮೂರನೇ ಶ್ರೇಯಾಂಕದ ಆಟಗಾರ್ತಿ, ಚೀನಾದ ಹಿ ಬಿಂಗ್‌ ಜಿಯಾವೊ ಮಹಿಳೆಯರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 21–11, 21–14 ರಿಂದ ಭಾರತದ ಸೈನಾ ನೆಹ್ವಾಲ್‌ ಅವರನ್ನು ಮಣಿಸಿದರು. ಪಂದ್ಯ 37 ನಿಮಿಷ ನಡೆಯಿತು.

ಮೂರು ಬಾರಿಯ ವಿಶ್ವ ಚಾಂಪಿಯನ್‌ ಕರೋಲಿನಾ ಮರಿನ್‌ ಇನ್ನೊಂದು ಪಂದ್ಯದಲ್ಲಿ ಭಾರತದ ಅಶ್ಮಿತಾ ಚಲಿಹಾ ಅವರನ್ನು 21–18, 21–13 ರಲ್ಲಿ ನೇರ ಗೇಮ್‌ಗಳಿಂದ ಸೋಲಿಸಿದರು. ಮರಿನ್‌ ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಭಾರತದ ಅಗ್ರಮಾನ್ಯ ಜೋಡಿಯಾದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಹೊರಬಿದ್ದರು. ಇಂಡೊನೇಷ್ಯಾದ ಮುಹಮ್ಮದ್‌ ಶೊಹಿಬುಲ್‌ ಫಿಕ್ರಿ–ಮೌಲಾನಾ ಬೇಗಾಸ್ ಜೋಡಿ 24–26, 21–11, 21–17 ರಿಂದ ಭಾರತದ ಜೋಡಿಯನ್ನು 62 ನಿಮಿಷಗಳ ಹೋರಾಟದಲ್ಲಿ ಸೋಲಿಸಿತು.

ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಅನ್ನು ಆರು ಹಂತಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ– ವಿಶ್ವ ಟೂರ್‌ ಫೈನಲ್ಸ್‌, ನಾಲ್ಕು ಸೂಪರ್‌ 1000 ಟೂರ್ನಿ, ಆರು ಸೂಪರ್‌ 750 ಟೂರ್ನಿ, ಏಳು ಸೂಪರ್‌ 500 ಸರಣಿ ಮತ್ತು 11 ಸೂಪರ್‌ 300 ಟೂರ್ನಿ. ಇದರ ಜೊತೆಗೆ ಬಿಡಬ್ಲ್ಯುಎಫ್‌ ಟೂರ್ ಸೂಪರ್‌ 100 ಮಟ್ಟದ ಟೂರ್ನಿಯಲ್ಲೂ ರ್‍ಯಾಂಕಿಂಗ್‌ ಪಾಯಿಂಟ್ಸ್ ಗಳಿಸುವ ಅವಕಾಶಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.