ADVERTISEMENT

ನೀರಜ್‌ ಮೇಲೆ ನಿರೀಕ್ಷೆಯ ಭಾರ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 19:52 IST
Last Updated 14 ಜುಲೈ 2022, 19:52 IST

ಯೂಜೀನ್, ಅಮೆರಿಕ (ಪಿಟಿಐ): ಶತಕೋಟಿಗೂ ಅಧಿಕ ಮಂದಿಯ ನಿರೀಕ್ಷೆ ಭಾರ ಹೊತ್ತುಕೊಂಡಿರುವ ನೀರಜ್‌ ಚೋಪ್ರಾ ಅವರು ಶುಕ್ರವಾರ ಇಲ್ಲಿ ಆರಂಭವಾಗುವ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿರುವ ಚೋಪ್ರಾ, ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡುವುದು ಬಹುತೇಕ ಖಚಿತ. ಈ ಋತುವಿನಲ್ಲಿ ಅವರು ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಎಲ್ಲ ಕೂಟಗಳಲ್ಲೂ 90 ಮೀ. ಸನಿಹದ ಪ್ರದರ್ಶನ ತೋರಿದ್ದಾರೆ.

ಜೂನ್‌ ತಿಂಗಳಲ್ಲಿ ಫಿನ್ಲೆಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಕೂಟದಲ್ಲಿ 89.30 ಮೀ. ಸಾಧನೆಯೊಂದಿಗೆ
ತಮ್ಮ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಸ್ಟಾಕ್‌ಹೋಮ್‌ ಡೈಮಂಡ್‌ ಲೀಗ್‌ನಲ್ಲಿ 89.94 ಮೀ. ಸಾಧನೆ ಮೂಲಕ ತಮ್ಮ ಪ್ರದರ್ಶನ ಉತ್ತಮಪಡಿಸಿಕೊಂಡಿದ್ದರು.

ADVERTISEMENT

ಗ್ರೆನಾಡದ ಆ್ಯಂಡರ್ಸನ್‌ ಪೀಟರ್ಸ್‌ ಅವರು ಇಲ್ಲಿ ಚೋಪ್ರಾಗೆ ಪೈಪೋಟಿ ನೀಡಲಿದ್ದಾರೆ. ಹಾಲಿ ಚಾಂಪಿಯನ್‌ ಆಗಿರುವ ಪೀಟರ್ಸ್‌ ಈ ಋತುವಿನಲ್ಲಿ 93.07 ಮೀ. ಸಾಧನೆ ಮಾಡಿದ್ದರು.

ಚೋಪ್ರಾ ಅವರನ್ನು ಹೊರತುಪಡಿಸಿದರೆ ಲಾಂಗ್‌ಜಂಪ್‌ ಸ್ಪರ್ಧಿ ಮುರಳಿ ಶ್ರೀಶಂಕರ್‌ ಭಾರತದ ಪರ ಅಲ್ಪ ಭರವಸೆ ಮೂಡಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದಿದ್ದ ಫೆಡರೇಷನ್‌ ಕಪ್‌ನಲ್ಲಿ ಅವರು 8.36 ಮೀ. ಸಾಧನೆ ಮಾಡಿದ್ದರು. ಈ ಋತುವಿನಲ್ಲಿ ವಿವಿಧ ದೇಶಗಳ ಸ್ಪರ್ಧಿಗಳ ಸಾಧನೆಗೆ ಹೋಲಿಸಿದರೆ, ಶ್ರೀಶಂಕರ್‌ ಅವರು ಎರಡನೇ ಸ್ಥಾನದಲ್ಲಿದ್ದಾರೆ.

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ 23 ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಪದಕಕ್ಕಾಗಿಪೈಪೋಟಿ ನಡೆಸಲಿದ್ದಾರೆ.

ಅಥ್ಲೆಟಿಕ್ ಕೂಟದ ನೇರ ಪ್ರಸಾರ: ರಾತ್ರಿ 9.35 (ಭಾರತೀಯ ಕಾಲಮಾನ) ಸೋನಿ, ಟೆನ್‌ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.