ಮಂಗಳೂರು: ವೃತ್ತಿಪರ ಪ್ಯಾಡಲ್ ಸರ್ಫರ್‌ಗಳ ವಿಶ್ವ ಟೂರ್ ಭಾಗವಾಗಿ ಇಲ್ಲಿನ ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪ್ಯಾಡಲ್ (ಎಸ್‌ಯುಪಿ) ಸ್ಪರ್ಧೆ ‘ಇಂಡಿಯಾ ಪ್ಯಾಡಲ್ ಫೆಸ್ಟಿವಲ್’ನ ಔಪಚಾರಿಕ ಉದ್ಘಾಟನೆ ಶುಕ್ರವಾರ ಸಂಜೆ ನಡೆಯಿತು.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಆಶ್ರಯದಲ್ಲಿ ಮಂಗಳೂರಿನ ಸರ್ಫಿಂಗ್ ಸ್ವಾಮಿ ಫೌಂಡೇಷನ್ ಮತ್ತು ಮಂತ್ರ ಸರ್ಫ್ ಕ್ಲಬ್ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಮೊದಲ ದಿನದ ಸ್ಪರ್ಧೆಗಳಿಗೆ ವಿಸಾ ಸಮಸ್ಯೆ ಅಡ್ಡಿಯಾಯಿತು.
ಚಾಂಪಿಯನ್‌ಷಿಪ್‌ನ ಮೊದಲ ಸ್ಪರ್ಧೆ ಜೂನಿಯರ್ ವಿಭಾಗದ ಟೆಕ್ನಿಕಲ್ ಡಿಸ್ಟನ್ಸ್ ರೇಸ್ ಸಂಜೆ 4.30ಕ್ಕೆ ಆರಂಭವಾಗಬೇಕಾಗಿತ್ತು. ಆದರೆ ಥಾಯ್ಲೆಂಡ್‌ನ ಕ್ರೀಡಾಪಟುಗಳು ತಲುಪದ ಕಾರಣ ಸ್ಪರ್ಧೆಗಳನ್ನು ಶನಿವಾರಕ್ಕೆ ಮುಂದೂಡಲಾಯಿತು.
‘ವೀಸಾ ಸಮಸ್ಯೆಯಾಗಿ ಥಾಯ್ಲೆಂಡ್‌ನಿಂದ ಬರುವವರಿಗೆ ಶುಕ್ರವಾರ ಮಂಗಳೂರು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಜೂನಿಯರ್ ಟೆಕ್ನಿಕಲ್ ಡಿಸ್ಟನ್ಸ್ ರೇಸ್ ಮುಂದೂಡಲಾಗಿದೆ. ಶನಿವಾರ ಮಧ್ಯಾಹ್ನ ಪುರುಷರ ಮತ್ತು ಮಹಿಳೆಯರ ಟೆಕ್ನಿಕಲ್ ಡಿಸ್ಟನ್ಸ್ ರೇಸ್ ನಡೆಯಲಿದೆ. ಅದಕ್ಕೂ ಮೊದಲು ಶುಕ್ರವಾರ ಮುಂದೂಡಿದ ಸ್ಪರ್ಧೆಗಳನ್ನು ಆಯೋಜಿಸಲಾಗುವುದು’ ಎಂದು ಸಂಘಟಕರು ‘ಪ್ರಜಾವಾಣಿ’ಗೆ ತಿಳಿಸಿದರು.
ಸಮುದ್ರದಲ್ಲಿ ಸಿಲುಕಿದ ಪ್ಯಾಡ್ಲರ್
ಉದ್ಘಾಟನಾ ಸಮಾರಂಭದ ನಂತರ ಅಭ್ಯಾಸಕ್ಕೆಂದು ಸಮುದ್ರಕ್ಕೆ ತೆರಳಿದ ತಮಿಳುನಾಡು ಬಾಲ ಪ್ಯಾಡ್ಲರ್ ಆಶಿಕ್, ಪ್ಯಾಡಲ್ ನಿಯಂತ್ರಿಸಲಾಗದೆ ಅಲೆಗಳ ನಡುವೆ ಸಿಲುಕಿದರು. ತಕ್ಷಣ ಧಾವಿಸಿದ ಡೆನ್ಮಾರ್ಕ್‌ನ ಸ್ಪರ್ಧಿ ಕ್ರಿಸ್ಟಿಯನ್ ಆ್ಯಂಡರ್ಸನ್ ಆ ಕ್ರೀಡಾಪಟುವನ್ನು ರಕ್ಷಿಸಿ ಕರೆತಂದರು. ಆ್ಯಂಡರ್ಸನ್ ವಿಶ್ವದ ಎರಡನೇ ಕ್ರಮಾಂಕದ ಪ್ಯಾಡ್ಲರ್ ಆಗಿದ್ದಾರೆ.
‘ಇಂಡಿಯಾ ಪ್ಯಾಡಲ್ ಫೆಸ್ಟಿವಲ್’ನ ಉದ್ಘಾಟನೆಯ ನಂತರ ಅಲೆಗಳ ನಡುವೆ ಸಿಲುಕಿದ ಬಾಲ ಕ್ರೀಡಾಪಟುವನ್ನು ಡೆನ್ಮಾರ್ಕ್‌ನ ಕ್ರಿಸ್ಟಿಯನ್ ಆ್ಯಂಡರ್ಸನ್ ರಕ್ಷಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.