ADVERTISEMENT

Tokyo Olympics: ಸವಾಲುಗಳಿಗೆ ಪಂಚ್ ನೀಡಿದ ಬಾಕ್ಸರ್ ಪೂಜಾ ಕ್ವಾರ್ಟರ್‌ಗೆ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2021, 10:27 IST
Last Updated 28 ಜುಲೈ 2021, 10:27 IST
ಪೂಜಾ ರಾಣಿ
ಪೂಜಾ ರಾಣಿ   

ಟೋಕಿಯೊ: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಮಹಿಳಾ ಬಾಕ್ಸರ್ ಪೂಜಾ ರಾಣಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ 75 ಕೆ.ಜಿ. ವಿಭಾಗದಲ್ಲಿ ಅಮೋಘ ನಿರ್ವಹಣೆ ನೀಡಿರುವ ಪೂಜಾ ರಾಣಿ ಎದುರಾಳಿ ಅಲ್ಜೇರಿಯಾದ ಇಚ್ರಾಕ್ ಚೈಬ್ ವಿರುದ್ಧ 5-0 ಅಂತರದ ಅಧಿಕಾರಯುತ ಗೆಲುವು ದಾಖಲಿಸಿದರು.

30 ವರ್ಷದ ಪೂಜಾ, ತಮಗಿಂತಲೂ 10 ವರ್ಷ ಕಿರಿಯಳಾದ ಎದುರಾಳಿ ಬಾಕ್ಸರ್ ಮೇಲೆ ನಿಖರ ಪಂಚ್‌ಗಳ ಮೂಲಕ ಗಮನ ಸೆಳೆದರು.

ಎರಡು ಬಾರಿಯ ಏಷ್ಯನ್ ಚಾಂಪಿಯನ್ ಪೂಜಾ ದಾಳಿಯಿಂದ ಪಾರಾಗಲು ಎದುರಾಳಿಗೆ ಸಾಧ್ಯವಾಗಲಿಲ್ಲ. ಪರಿಣಾಮ ಪದೇ ಪದೇ ಸಮತೋಲನವನ್ನು ಕಾಪಾಡಲು ಪರದಾಡಿದರು. ಅಲ್ಲದೆ ಎಲ್ಲ ಮೂರು ಸುತ್ತಿನ ಹೋರಾಟದಲ್ಲೂ ಪೂಜಾ ಮೇಲುಗೈ ಸಾಧಿಸಿದರು.

ವೃತ್ತಿ ಜೀವನಕ್ಕೆ ಮಾರಕವಾಗಬಲ್ಲ ಭುಜ ನೋವಿನಿಂದ ಚೇತರಿಸಿಕೊಂಡು ಮತ್ತೆ ಬಾಕ್ಸಿಂಗ್ ರಿಂಗ್‌ಗಿಳಿದಿರುವ ಪೂಜಾ ಈ ಪ್ರದರ್ಶನದ ಮೂಲಕ ಭಾರತದ ಭರವಸೆಯಾಗಿ ಮೂಡಿಬಂದಿದ್ದಾರೆ.

ಹಣಕಾಸಿನ ಕೊರತೆ, ಆರಂಭದಲ್ಲಿ ಅಪ್ಪನ ವಿರೋಧ ಹೀಗೆ ಹಲವು ಸಮಸ್ಯೆಗಳನ್ನು ಮೆಟ್ಟಿ ನಿಂತಿರುವ ಪೂಜಾ ಅವರಿಂದ ಒಲಿಂಪಿಕ್ಸ್ ಪದಕದ ಕನಸು ನನಸಾಗಲಿ ಎಂಬುದು ಕ್ರೀಡಾಭಿಮಾನಿಗಳ ಹಾರೈಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.