ADVERTISEMENT

ಒಲಿಂಪಿಕ್ಸ್: ಟೋಕಿಯೊ ಸಮಯಾನುಸಾರ ಮಹಿಳಾ ಹಾಕಿ ತಂಡದ ಅಭ್ಯಾಸ

ಪಿಟಿಐ
Published 4 ಜೂನ್ 2021, 11:23 IST
Last Updated 4 ಜೂನ್ 2021, 11:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಒಲಿಂಪಿಕ್‌ ಕೂಟಕ್ಕೆ ಸಜ್ಜುಗೊಳ್ಳುತ್ತಿರುವ ಭಾರತ ಹಾಕಿ ತಂಡದ ಆಟಗಾರ್ತಿಯರು, ತರಬೇತಿ ಅವಧಿಯನ್ನು ಟೋಕಿಯೊ ವೇಳೆಗೆ ಹೊಂದಿಸಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ. ತಂಡದ ಮಿಡ್‌ಫೀಲ್ಡರ್‌ ನಮಿತಾ ಟೊಪ್ಪೊ ಈ ವಿಷಯ ತಿಳಿಸಿದ್ದಾರೆ.

ಭಾರತ ಮಹಿಳಾ ತಂಡದವರು ಸದ್ಯ ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಬಯೊಸೆಕ್ಯೂರ್ ವಾತಾವರಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಜುಲೈ 23ರಂದು ಟೋಕಿಯೊ ಕೂಟಕ್ಕೆ ಚಾಲನೆ ಸಿಗಲಿದ್ದು, ತಂಡದಲ್ಲಿ ಉತ್ಸುಕತೆ ಮನೆಮಾಡಿದೆ.

‘ಟೋಕಿಯೊದಲ್ಲಿನ ಹವಾಮಾನ ನಮಗೆ ಸವಾಲಾಗುವ ಸಾಧ್ಯತೆಯಿದೆ. ಅಲ್ಲಿ ಪಂದ್ಯಗಳು ನಡೆಯುವ ವೇಳೆಗೆ ನಮ್ಮ ಜೈವಿಕ ಗಡಿಯಾರವನ್ನು ಹೊಂದಿಸಿಕೊಂಡು ತಾಲೀಮು ನಡೆಸುತ್ತಿದ್ದೇವೆ. ಫಿಟ್‌ನೆಸ್‌ಗೆ ಮಹತ್ವ ನೀಡುತ್ತಿದ್ದೇವೆ‘ ಎಂದು ಪ್ರಕಟಣೆಯಲ್ಲಿ ನಮಿತಾ ತಿಳಿಸಿದ್ದಾರೆ.

ADVERTISEMENT

‘ನಮ್ಮಲ್ಲಿಯೇ ತಂಡಗಳನ್ನು ಮಾಡಿಕೊಂಡು ಪಂದ್ಯಗಳನ್ನು ಆಡುತ್ತಿದ್ದೇವೆ. ಒಲಿಂಪಿಕ್ಸ್‌ ಆರಂಭಕ್ಕೆ ಇನ್ನು 50ಕ್ಕಿಂತ ಕಡಿಮೆ ದಿನಗಳು ಉಳಿದಿರುವುದರಿಂದ ಕುತೂಹಲ ಹೆಚ್ಚಿದೆ‘ ಎಂದು ಅವರು ನುಡಿದರು.

‘ಟೋಕಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ಅಂತಿಮ 16 ಮಂದಿಯ ತಂಡಕ್ಕಾಗಿ ಕಾಯಲಾಗುತ್ತಿದೆ. ತಂಡದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಹಲವು ಯುವ ಆಟಗಾರ್ತಿಯರು ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ಏಷ್ಯನ್‌ ಗೇಮ್ಸ್ ಹಾಗೂ ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿದ ಅನುಭವಗಳೂ ಅವರಿಗಿದೆ‘ ಎಂದು ನಮಿತಾ ಹೇಳಿದರು.

ನಮಿತಾ ಅವರು ಭಾರತ ತಂಡದ ಪರ 160 ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.