ADVERTISEMENT

Tokyo Olympics: ಬಜರಂಗ್ ಪೂನಿಯಾ ಕಂಚು–ಮಿಂಚು

ಅಪ್ಪ ತುಂಬಿದ ಹುರುಪಿಗೆ ಒಲಿದ ಜಯ: ಹರಿಯಾಣ ಪೈಲ್ವಾನನ ಸಾಧನೆ

ಪಿಟಿಐ
Published 7 ಆಗಸ್ಟ್ 2021, 20:24 IST
Last Updated 7 ಆಗಸ್ಟ್ 2021, 20:24 IST
ಬಜರಂಗ್ ಪೂನಿಯಾ
ಬಜರಂಗ್ ಪೂನಿಯಾ    

ಟೋಕಿಯೊ: ಶನಿವಾರ ಬಜರಂಗ್ ಪೂನಿಯಾಗೆ ಅಪ್ಪ ಬಲವಾನ್ ಸಿಂಗ್ ಅವರು ತುಂಬಿದ ಹುರುಪು ಹುಸಿ ಹೋಗಲಿಲ್ಲ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾದರು.

ಶನಿವಾರ ಪುರುಷರ 65 ಕೆಜಿ ವಿಭಾಗದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಬೌಟ್‌ನಲ್ಲಿ ಬಜರಂಗ್ ಪೂನಿಯಾ 8–0ಯಿಂದ ಕಜಕಸ್ತಾನದ ದೌಲೆತ್ ನಿಯಾಜ್‌ಬೆಕೊವ್‌ ವಿರುದ್ಧ ಗೆದ್ದರು ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ಪ್ರತಿಭಾವಂತ ಕುಸ್ತಿಪಟು ಶುಕ್ರವಾರ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದರು. ಮಂಡಿನೋವಿನ ಕಾರಣದಿಂದ ಲೆಗ್‌ ಡಿಫೆನ್ಸ್‌ನಲ್ಲಿ ದುರ್ಬಲರಾಗಿದ್ದ ಅವರು ಸೋತಿದ್ದರು.

ADVERTISEMENT

ಅದರ ನಂತರ ಹರಿಯಾಣದಲ್ಲಿರುವ ಬಲವಾನ್ ಸಿಂಗ್ ಅವರು ಮಗನೊಂದಿಗೆ ವಿಡಿಯೊ ಕಾಲ್‌ ಮಾಡಿ ಹುರುಪು ತುಂಬಿದ್ದರು. ಬಜರಂಗ್ ತಾಯಿ ಮಗ ಪದಕ ಗೆದ್ದ ಸುದ್ದಿ ಬರುವವರೆಗೂ ದೇವರ ಪೂಜೆ ಮಾಡುತ್ತಲೇ ಇದ್ದ ದೃಶ್ಯಗಳು ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದವು.

‘ನೀನು ಸೆಮಿಫೈನಲ್‌ನಲ್ಲಿ ಸೋತಿಲ್ಲ. ಮಂಡಿನೋವಿನಿಂದ ಹಾಗಾಗಿದೆ. ಅದನ್ನು ಮರೆತುಬಿಡು. ಪದಕ ಜಯಿಸುವ ಅವಕಾಶ ಇನ್ನೂ ಇದೆ. ದೇಶಕ್ಕೆ ಕಾಣಿಕೆ ನೀಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಎದ್ದು ಅಭ್ಯಾಸ ಮಾಡು. ಚೆನ್ನಾಗಿ ಆಡು’ ಎಂದಿದ್ದರು ಬಲವಾನ್ ಸಿಂಗ್.

ಅದರಂತೆಯೇ ಅವರ ಬೌಟ್‌ನಲ್ಲಿ ಯಾವುದೇ ದೌರ್ಬಲ್ಯಗಳೂ ಕಾಣಲಿಲ್ಲ. ಚುರುಕಾದ ಚಲನೆಗಳು ಮತ್ತು ಪಟ್ಟುಗಳಿಂದ ಎದುರಾಳಿಯನ್ನು ಕಂಗೆಡಿಸಿದರು. ಇದೇ ಮೊದಲ ಬಾರಿ ಒಲಿಂಪಿಕ್‌ ಕೂಟದಲ್ಲಿ ಸ್ಪರ್ಧಿಸಿದ್ದ ಬಜರಂಗ್ ಪದಕದೊಂದಿಗೆ ಸಂಭ್ರಮಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಮಹತ್ವದ ಅಂತರರಾಷ್ಟ್ರೀಯ ಪದಕಗಳನ್ನು ಜಯಿಸಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಮನೆಯ ಅಖಾಡದಲ್ಲಿಯೇ ಅಭ್ಯಾಸ ಮಾಡಿದ್ದರು. ಫಿಟ್‌ನೆಸ್‌ ಕಾಯ್ದುಕೊಳ್ಳಲು ಹೊಲಗದ್ದೆಯಲ್ಲಿ ಕೃಷಿ ಕೆಲಸವನ್ನೂ ಮಾಡಿ ಗಮನ ಸೆಳೆದಿದ್ದರು.

ಬಜರಂಗ್ ಅವರ ಸಾಧನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.