ADVERTISEMENT

Tokyo Olympics ಹಾಕಿ: ಆತಿಥೇಯ ಜಪಾನ್ ತಂಡವನ್ನು ಬಗ್ಗುಬಡಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2021, 11:38 IST
Last Updated 30 ಜುಲೈ 2021, 11:38 IST
ಭಾರತ ಹಾಕಿ ತಂಡದ ಸಂಭ್ರಮ
ಭಾರತ ಹಾಕಿ ತಂಡದ ಸಂಭ್ರಮ   

ಟೋಕಿಯೊ: ಪುರುಷರ ಹಾಕಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿರುವ ಭಾರತದ ತಂಡವು ಆತಿಥೇಯ ಜಪಾನ್ ತಂಡವನ್ನು 5-3ರ ಗೋಲುಗಳ ಅಂತರದಲ್ಲಿ ಬಗ್ಗುಬಡಿದಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಶುಕ್ರವಾರ ನಡೆದ 'ಎ' ಗುಂಪಿನ ಕೊನೆಯ ಪಂದ್ಯದಲ್ಲೂ ಭಾರತದ ಆಟಗಾರರು ಪಾರಮ್ಯ ಮೆರೆದರು.

ಆಗಲೇ ಕ್ವಾರ್ಟರ್‌ಫೈನಲ್ ಸ್ಥಾನವನ್ನು ಗಟ್ಟಿಮಾಡಿಕೊಂಡಿರುವ ಭಾರತ, ಈ ಗೆಲುವಿನೊಂದಿಗೆ ನಿರ್ಣಾಯಕ ನಾಕೌಟ್ ಹಂತಕ್ಕೂ ಮುನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಭಾರತದ ಪರ ಗುರ್ಜಂತ್ ಸಿಂಗ್ ಎರಡು (17ನೇ ಹಾಗೂ 56ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (13ನೇ ನಿಮಿಷ), ಶಂಶೇರ್ ಸಿಂಗ್ (34ನೇ ನಿಮಿಷ) ಹಾಗೂ ನೀಲಕಂಠ (51ನೇ ನಿಮಿಷ) ವಿಜಯದ ಗೋಲುಗಳನ್ನು ಬಾರಿಸಿದರು. ಜಪಾನ್ ಪರ ಕೆಂಟ ತನಕ (19ನೇ ನಿಮಿಷ), ಕೋಟ ವಾಟನಬೆ (33ನೇ ನಿಮಿಷ) ಹಾಗೂ ಕಜುಮ ಮುರಾಟ (59ನೇ ನಿಮಿಷ) ಗೋಲು ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಎದುರಾಗಿರುವುದನ್ನು ಹೊರತುಪಡಿಸಿದರೆ ಭಾರತದ ತಂಡ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿದೆ. ಅಲ್ಲದೆ ನಾಲ್ಕು ಗೆಲುವಿನೊಂದಿಗೆ ಒಟ್ಟು 12 ಅಂಕ ಸಂಪಾದಿಸಿ 'ಎ' ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ನಾಕೌಟ್ ಹಂತಕ್ಕೆ ತೇರ್ಗಡೆಯನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.