ADVERTISEMENT

ಟೋಕಿಯೊ ಒಲಿಂಪಿಕ್ಸ್‌ 2020: ‘ರೋಯಿಂಗ್‌ ಯೋಧ’ರ ಪದಕದ ತವಕ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 19:24 IST
Last Updated 13 ಜುಲೈ 2021, 19:24 IST
ನೇತ್ರಾ ಕುಮನನ್‌- ‘ನೇತ್ರಾ ಕುಮನನ್‌– ಮೈ ಸೇಲಿಂಗ್ ಕ್ಯಾಂಪೇನ್‌‘ ಹೆಸರಿನ ಖಾತೆಯ ಫೇಸ್‌ಬುಕ್ ಚಿತ್ರ
ನೇತ್ರಾ ಕುಮನನ್‌- ‘ನೇತ್ರಾ ಕುಮನನ್‌– ಮೈ ಸೇಲಿಂಗ್ ಕ್ಯಾಂಪೇನ್‌‘ ಹೆಸರಿನ ಖಾತೆಯ ಫೇಸ್‌ಬುಕ್ ಚಿತ್ರ   

ಒಲಿಂಪಿಕ್ಸ್‌ನಲ್ಲಿ ಭಾರತ ಪದಕದ ಬರ ಎದುರಿಸುತ್ತಿರುವ ಕ್ರೀಡೆಗಳಲ್ಲಿ ರೋಯಿಂಗ್ ಮತ್ತು ಸೇಲಿಂಗ್ ಕೂಡ ಸೇರಿವೆ. ಸ್ಪರ್ಧೆ ಮಾತ್ರ ಸಾಧ್ಯವಾಗಿರುವ ಈ ವಿಭಾಗಗಳ ‘ದೋಣಿ‘ಗೆ ಪದಕದ ಮೀನು ಬೀಳಬೇಕಿದೆ.

ಒಲಿಂಪಿಕ್ಸ್‌ನ ರೋಯಿಂಗ್‌ ಸ್ಪರ್ಧೆಯಲ್ಲಿ ಭಾರತ ಪದಾರ್ಪಣೆ ಮಾಡಿದ್ದು 2000 ಸಿಡ್ನಿ ಕ್ರೀಡಾಕೂಟದಲ್ಲಿ. ಕಸಮ್‌ ಖಾನ್ ಹಾಗೂ ಇಂದರ್‌ ಪಾಲ್ ಸಿಂಗ್‌ ಅವರ ಜೋಡಿಯು ‘ಕಾಕ್ಸ್‌ಲೆಸ್‌ ಪೇರ್‘ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಇದಾದ ಬಳಿಕ ನಡೆದ ಪ್ರತಿ ಒಲಿಂಪಿಕ್ಸ್‌ನಲ್ಲೂ ಭಾರತದ ಪ್ರಾತಿನಿಧ್ಯವಿದೆ. ಆದರೆ ಪದಕ ಗಳಿಕೆ ಇನ್ನೂ ಸಾಧ್ಯವಾಗಿಲ್ಲ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ದತ್ತು ಬಾಬನ್ ಭೋಕನಾಳ್‌, ಸಿಂಗಲ್‌ ಸ್ಕಲ್ಸ್ ವಿಭಾಗದಲ್ಲಿ 13ನೇ ಸ್ಥಾನ ಗಳಿಸಿದ್ದೇ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ADVERTISEMENT

ಈ ಬಾರಿ ಅರ್ಹತೆ ಗಿಟ್ಟಿಸಿರುವ ಅರ್ಜುನ್ ಲಾಲ್‌ ಜಾಟ್‌, ಅರವಿಂದ್ ಸಿಂಗ್‌ ಹೆಚ್ಚಿನ ಸಾಮರ್ಥ್ಯ ತೋರುವ ನಿರೀಕ್ಷೆಯಿದೆ. ಟೋಕಿಯೊದಲ್ಲಿಮೇನಲ್ಲಿ ನಡೆದ ಏಷ್ಯಾ ಒಷಿನಿಯಾ ಅರ್ಹತಾ ಲೈಟ್‌ವೇಟ್‌ ಡಬಲ್ ಸ್ಕಲ್ಸ್‌ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿ ಅವರು ಕ್ರೀಡಾಕೂಟಕ್ಕೆ ಪ್ರವೇಶ ಗಿಟ್ಟಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಯೋಧರಾಗಿರುವ ಇವರಿಬ್ಬರಿಗಿರುವುದು ರೈತ ಕುಟುಂಬದ ಹಿನ್ನೆಲೆ. ರಾಜಸ್ಥಾನದ ಅರ್ಜುನ್‌ ಮತ್ತು ಉತ್ತರ ಪ್ರದೇಶದ ಅರವಿಂದ್‌ ಅವರು ಸೈನ್ಯ ಸೇರ್ಪಡೆಯಾದವರು. ಅಲ್ಲಿಯೇ ರೋಯಿಂಗ್ ಕುರಿತು ಆಸಕ್ತಿ ಬೆಳೆಸಿಕೊಂಡವರು.

ದಕ್ಷಿಣ ಕೊರಿಯಾದ ಚುಂಗ್‌ಜುನಲ್ಲಿ ನಡೆದ 2019ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಈ ಜೋಡಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿತ್ತು. ಹೀಗಾಗಿ ಈ ಯೋಧರು ಟೋಕಿಯೊ ಕೂಟದಲ್ಲಿ ಪದಕಗಳಿಗೆ ಗುರಿ ಇಡುವ ನಿರೀಕ್ಷೆ ಗರಿಗೆದರಿದೆ.

ಸೇಲಿಂಗ್‌ನಲ್ಲಿ ಭರವಸೆಯ ನೇತ್ರಾ:ಸೇಲಿಂಗ್ ವಿಭಾಗದಲ್ಲಿ ಭಾರತ ಮೊದಲ ಬಾರಿ ಸ್ಪ‍ರ್ಧಿಸಿದ್ದು 1972ರ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ. ಸೋಲಿ ಕಾಂಟ್ರ್ಯಾಕ್ಟರ್‌ ಮತ್ತು ಅಹಮದ್‌ ಅಬ್ದುಲ್ ಬಾಸಿತ್‌ ಅವರು ಆ ಕ್ರೀಡಾಕೂಟದಲ್ಲಿ ಫ್ಲೈಯಿಂಗ್ ಡಚ್‌ಮನ್‌ ಕ್ಲಾಸ್‌ ವಿಭಾಗದಲ್ಲಿ 29ನೇ ಸ್ಥಾನ ಗಳಿಸಿದ್ದರು. ಬಳಿಕ ಹೆಚ್ಚಿನ ಸ್ಪರ್ಧಿಗಳು ಒಲಿಂಪಿಕ್ಸ್ ಅರ್ಹತೆ ಗಳಿಸಿಲ್ಲ.

ಈ ಬಾರಿಯ ವಿಶೇಷವೆಂದರೆ ಭಾರತದಿಂದ ಮೊದಲ ಬಾರಿ ಮಹಿಳಾ ಸ್ಪರ್ಧಿಯೊಬ್ಬರು ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ದೇಶ ನಾಲ್ವರು ಸ್ಪರ್ಧಿಗಳು ಸ್ಪರ್ಧಿಸಲಿರುವುದು ಇದೇ ಮೊದಲು. ಲೇಸರ್‌ ರೇಡಿಯಲ್ ಕ್ಲಾಸ್ ವಿಭಾಗದಲ್ಲಿ ಅರ್ಹತೆ ಗಿಟ್ಟಿಸಿರುವ ನೇತ್ರಾ ಕುಮನನ್‌ ಮೇಲೆ ನಿರೀಕ್ಷೆ ಇದೆ. ಕರ್ನಾಟಕದ ಗಣಪತಿ ಚೆಂಗಪ್ಪ, ವಿಷ್ಣು ಸರವಣನ್‌, ಮತ್ತು ವರುಣ್ ಠಕ್ಕರ್‌ ಟೋಕಿಯೊಗೆ ತೆರಳಿರುವ ಇನ್ನುಳಿದ ಸೇಲಿಂಗ್ ಸ್ಪರ್ಧಿಗಳು.

ಈ ಬಾರಿಯ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದವರು:
ರೋಯಿಂಗ್‌: ಅರ್ಜುನ್ ಲಾಲ್‌ ಜಾಟ್‌, ಅರವಿಂದ್ ಸಿಂಗ್‌.

ಸೇಲಿಂಗ್‌: ನೇತ್ರಾ ಕುಮನನ್‌ (ಲೇಸರ್‌ ರೇಡಿಯಲ್ ಕ್ಲಾಸ್ ವಿಭಾಗ), ವಿಷ್ಣು ಸರವಣನ್‌ (ಲೇಸರ್‌ ಸ್ಟ್ಯಾಂಡರ್ಡ್ ಕ್ಲಾಸ್‌), ಗಣಪತಿ ಚೆಂಗಪ್ಪ– ವರುಣ್ ಥಕ್ಕರ್‌ (49ಇಆರ್‌ ಕ್ಲಾಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.