ADVERTISEMENT

Tokyo Olympics | ಕನ್ನಡಿಗ ಶ್ರೀಹರಿ ಒಲಿಂಪಿಕ್ಸ್ ಪದಕದ ಕನಸು ಭಗ್ನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2021, 12:02 IST
Last Updated 25 ಜುಲೈ 2021, 12:02 IST
ಶ್ರೀಹರಿ ನಟರಾಜ್
ಶ್ರೀಹರಿ ನಟರಾಜ್   

ಟೋಕಿಯೊ: ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್ ಟೋಕಿಯೊ ಒಲಂಪಿಕ್ಸ್‌ನಲ್ಲಿ ಈಜು ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಭಾನುವಾರ ನಡೆದ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಒಟ್ಟಾರೆಯಾಗಿ 27ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದರೊಂದಿಗೆ ಪದಕದ ಕನಸು ಕಮರಿದೆ.

100 ಮೀಟರ್ ಬ್ಯಾಕ್‌ಸ್ಟ್ರೋಕ್ ಹೀಟ್ ಅನ್ನು 54.32 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಶ್ರೀಹರಿ ಆರನೇ ಸ್ಥಾನ ಪಡೆದರು. ಆದರೆ ಒಟ್ಟಾರೆಯಾಗಿ 40 ಈಜುಪಟುಗಳ ಪೈಕಿ 27ನೇ ಸ್ಥಾನ ಗಿಟ್ಟಿಸಿದ್ದಾರೆ. ಅಗ್ರ 16 ಈಜುಪಟುಗಳು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

20 ವರ್ಷದ ಬೆಂಗಳೂರಿನ ಶ್ರೀಹರಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೂನ್‌ನಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ವೈಯಕ್ತಿಕ ಶ್ರೇಷ್ಠ 53.77 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.

2018ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲೂ ಸ್ಪರ್ಧಿಸಿದ್ದರು. ಅದೇ ವರ್ಷ ನಡೆದಿದ್ದ ಯೂತ್ ಒಲಿಂಪಿಕ್ಸ್‌ನಲ್ಲೂ ಭಾಗವಹಿಸಿದ್ದರು.

ಇದರೊಂದಿಗೆ ಒಲಿಂಪಿಕ್ಸ್ ಮೂರನೇ ದಿನವಾದ ಭಾನುವಾರದಂದು ಭಾರತ ಪದಕ ಗೆಲ್ಲುವಲ್ಲಿ ವಿಫಲವಾಗಿದೆ. ಶನಿವಾರದಂದು ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.