ಹೀಗಿದೆ ನಮ್ ಟೀಂ...
ಚಿತ್ರಗಳು: ಅನೂಪ್ ರಾಘ ಟಿ.
ಕೊಕ್ಕೊ ವಿಶ್ವಕಪ್‌ನಲ್ಲಿ ಚೈತ್ರಾ ಮಿಂಚುವಾಗ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಅಭಿನಂದನೆ ಮತ್ತು ಮೆಚ್ಚುಗೆಯ ಮಹಾಪೂರವನ್ನೇ ಸಚಿವರು, ಶಾಸಕರು, ಸಂಘ–ಸಂಸ್ಥೆಯವರು ಹರಿಸಿದರು. ಆದರೆ ಇಷ್ಟರಿಂದಲೇ ಕುರುಬೂರು ಹೆಣ್ಣುಮಕ್ಕಳು ಕೊಕ್ಕೊ ಆಟದಲ್ಲಿ ಉನ್ನತಿಗೇರಲು ಸಾಧ್ಯವಿಲ್ಲ. ಇಲ್ಲೊಂದು ಕೊಕ್ಕೊ ಅಕಾಡೆಮಿ ಆಗಬೇಕು. ಆಗ ಮಾತ್ರ ಅಭಿನಂದನೆಗೆ ಬೆಲೆ ಬರುತ್ತದೆ.
ಗೊಬ್ಬಳಿ ಮರದ ಪೋಲ್‌ಗೆ ಅಲ್ಲಿದ್ದ ಹುಡುಗಿಯರೆಲ್ಲ ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೊಕ್ಕೊ ಅಭ್ಯಾಸಕ್ಕಾಗಿ ಕೋರ್ಟ್‌ಗೆ ನುಗ್ಗಿದರು. ಚಿಗರೆಯಂತೆ ಓಡುತ್ತಿದ್ದವರನ್ನು ಹಿಡಿಯುವ ಗುರಿ ಅವರದು, ಮೀನಿನಂತೆ ಜಾರಿಕೊಳ್ಳುವ ತಂತ್ರ ಇವರದು- ಹೀಗೆ ಓಡುವ, ಹಿಡಿಯುವ ಆಟ ಜೋರಾಗಿಯೇ ನಡೆಯಿತು. ಇಡೀ ಮೈ ಬೆವರಿನಿಂದ ಸ್ನಾನ ಮಾಡಿತ್ತು. ಅವರ ಅಭ್ಯಾಸದ ಬಿಡುವಿನಲ್ಲಿ ಮಾತಿಗೆ ಕುಳಿತೆ.
‘ನೀವು ಯಾಕೆ ಆ ಗೊಬ್ಬಳಿ ಮರದ ಪೋಲ್‌ಗೆ ನಮಸ್ಕರಿಸಿದ್ದು’ ಕೇಳಿದೆ. ‘ನಮಗೆ ಇಂದಿಗೂ ಸರಿಯಾದ ಕೊಕ್ಕೊ ಕೋರ್ಟ್ ಇಲ್ಲ. ಶುರುವಿನಲ್ಲಿ ಶಾಲೆ ಹಿಂದೆ ಇದ್ದ ತೆಂಗಿನತೋಟದಲ್ಲಿ ನಮ್ಮ ಅಭ್ಯಾಸ ನಡೆಯುತ್ತಿತ್ತು. ಆ ಕೋರ್ಟ್ ಹೇಗಿತ್ತು ಅಂದ್ರೆ ಉದ್ದ ಸಾಕಾಗುತ್ತಿತ್ತು, ಆದರೆ ಅಗಲ ಕೇಳಲೇಬೇಡಿ. ಆಗ ನಮಗೆ ಸರಿಯಾಗಿ ಎರಡು ಪೋಲ್‌ಗಳೂ ಇರಲಿಲ್ಲ. ಅಲ್ಲೇ ಇದ್ದ ಗೊಬ್ಬಳಿ ಮರ ಕಡಿದು ಎರಡು ಪೋಲ್‌ಗಳನ್ನು ಮಾಡಿಕೊಂಡೆವು. ವರ್ಷಗಳ ನಂತರ ಒಂದು ಪೋಲ್ ಹಾಳಾಯ್ತು. ಇನ್ನೊಂದನ್ನು ಅಂದಿನಿಂದಲೂ ಇಟ್ಟುಕೊಂಡು ಹೀಗೆ ನಮಸ್ಕರಿಸಿ ಅಭ್ಯಾಸ ಶುರು ಮಾಡುತ್ತೇವೆ’ ಎಂದು ಕೋಚ್ ಮಂಜುನಾಥ್ ಹೇಳಿದರು.
ಇದು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಕುರುಬೂರು ಹೆಣ್ಣುಮಕ್ಕಳ ಕೊಕ್ಕೊ ಅಭ್ಯಾಸದ ಕಥೆ. ಕೊಕ್ಕೊ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಗೆದ್ದ ಚೈತ್ರಾ ಇದೇ ಊರಿನವರು. ಇಲ್ಲಿ ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಕೊಕ್ಕೊಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಈ ಊರಿಗೆ ‘ಕೊಕ್ಕೊ ಕುರುಬೂರು’ ಎನ್ನುವ ಹೆಸರನ್ನು ಜನರೇ ಕೊಟ್ಟಿದ್ದಾರೆ.
ವಿಶ್ವಕಪ್ ಜಯಿಸಿದ ಕಾರಣಕ್ಕಾಗಿ ಚೈತ್ರಾ ಹೆಸರು ಎಲ್ಲೆಡೆ ಕೇಳಿಬರುತ್ತಿದೆ. ಅಚ್ಚರಿಯ ವಿಷಯವೆಂದರೆ ಇದೇ ಹಳ್ಳಿಯ ವಿದ್ಯಾದರ್ಶಿನಿ ಶಾಲೆಯಲ್ಲಿ ನೂರಾರು ಕೊಕ್ಕೊ ಪ್ರತಿಭೆಗಳಿವೆ. ಒಂದೇ ಹಳ್ಳಿಯಲ್ಲಿ ಮನೆ ಮನೆಗೂ ಪ್ರತಿಭಾವಂತ ಆಟಗಾರ್ತಿಯರು ಇರುವುದು ಬಹುಶಃ ಇದೊಂದೇ ಗ್ರಾಮದಲ್ಲಿ ಅನಿಸುತ್ತದೆ.
ಜೈತ್ರಯಾತ್ರೆಗೆ ಮುನ್ನುಡಿ
ವಿದ್ಯಾದರ್ಶಿನಿ ಶಾಲೆಯ ವಿದ್ಯಾರ್ಥಿನಿಯರು ತಾವೇ ಕೊಕ್ಕೊ ತಂಡ ಮಾಡಿಕೊಂಡು ಹೋಬಳಿ ಮಟ್ಟದ ಪಂದ್ಯಾವಳಿಗೆ ತಯಾರಿ ನಡೆಸಿರುತ್ತಾರೆ. ಮಂಜುನಾಥ್ ಎನ್ನುವವರು ಶಾಲೆಗೆ ಹೊಸದಾಗಿ ಗಣಿತದ ಶಿಕ್ಷಕರಾಗಿ ಬಂದಿರುತ್ತಾರೆ. ಮಕ್ಕಳು ಅಭ್ಯಾಸ ಮಾಡುವುದನ್ನು ಸುಮ್ಮನೆ ಗಮನಿಸುತ್ತಿರುತ್ತಾರೆ. ಹೋಬಳಿ ಮಟ್ಟದ ಸ್ಪರ್ಧೆಯಲ್ಲಿ ಸೋತ ಮಕ್ಕಳು ಪೆಚ್ಚು ಮೋರೆ ಹಾಕಿ ಅಳುತ್ತಾ ಬಂದಿರುತ್ತಾರೆ. ಆಗ ಮಂಜುನಾಥ್ ಅವರಿಗೆ ಬೇಸರವಾಗುತ್ತದೆ. ‘ಮುಂದಿನ ವರ್ಷ ಖಂಡಿತ ಗೆಲ್ಲುತ್ತೀರಿ, ನಾನು ನಿಮ್ಮನ್ನು ತಯಾರು ಮಾಡುತ್ತೇನೆ’ ಎಂದು ಸಮಾಧಾನಿಸುತ್ತಾರೆ.
ಮಂಜುನಾಥ್ ಅವರಿಗೆ ಕೊಕ್ಕೊ ಬಗ್ಗೆ ಅಷ್ಟೇನೂ ಗೊತ್ತಿರುವುದಿಲ್ಲ. ಮೊದಲಿಗೆ ಕೊಕ್ಕೊ ಸಂಬಂಧಿಸಿದ ಪುಸ್ತಕಗಳನ್ನು ಅಭ್ಯಾಸ ಮಾಡುತ್ತಾರೆ. ಟಿವಿಯಲ್ಲಿ ಕೊಕ್ಕೊ ಪಂದ್ಯಗಳನ್ನು ನಿರಂತರವಾಗಿ ನೋಡುತ್ತಾ ಪಟ್ಟುಗಳನ್ನು ಪಟ್ಟಿ ಮಾಡಿಕೊಳ್ಳುತ್ತಾರೆ. ಅದನ್ನು ಅನುಸರಿಸಿ ಮಕ್ಕಳನ್ನು ತಯಾರು ಮಾಡುತ್ತಾರೆ. ಆ ವರ್ಷ ರಂಗಸಮುದ್ರವನ್ನು (ಆಗಿನ ಬಲಿಷ್ಠ ತಂಡ) ಕುರುಬೂರು ತಂಡ ಸೋಲಿಸುತ್ತದೆ. 2009ರ ಈ ಗೆಲುವು ತಂಡಕ್ಕೆ ಕಡಲಷ್ಟು ಆತ್ಮವಿಶ್ವಾಸ ತಂದು ಕೊಡುತ್ತದೆ. ಇನ್ನಷ್ಟು ಶ್ರಮ ಹಾಕಿ, ನಿರಂತರ ಅಭ್ಯಾಸ ಮಾಡುತ್ತಾರೆ. ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟ, ಇಷ್ಟೇ ಏಕೆ ಹೋದಲ್ಲೆಲ್ಲಾ ಕಪ್‌ಗಳು, ಟ್ರೋಫಿಗಳನ್ನು ಗೆದ್ದು ಬರುತ್ತಲೇ ಇರುತ್ತಾರೆ. ಊರಿನ ಜನ ‘ಮಕ್ಕಳು ಏನೋ ಆಟ ಆಡ್ಕತವೆ’ ಅಂದುಕೊಂಡಿದ್ದರು. ಕಪ್‌ಗಳು, ಟ್ರೋಫಿಗಳನ್ನು ಕಂಡು ಪುಳಕಿತರಾಗಿ ‘ಭೇಷ್’ ಎಂದು ಬೆನ್ನುತಟ್ಟತೊಡಗಿದರು. ಮಕ್ಕಳ ಬೆಳವಣಿಗೆ ಮೇಲೆ ಹೆಚ್ಚು ನಿಗಾ ಇಟ್ಟು ಉತ್ತೇಜಿಸತೊಡಗಿದರು. ವರ್ಷಗಳು ಕಳೆದಂತೆ ಕುರುಬೂರಿನ ಹುಡುಗಿಯರು ರಾಜ್ಯಮಟ್ಟದ ತಂಡಕ್ಕೂ ಆಯ್ಕೆಯಾದರು.
ಇದು 2010ರಲ್ಲಿ ನಡೆದ ಘಟನೆ. ಕುರುಬೂರಿನ ಮೇಘಾ ಎಂಬ ಆಟಗಾರ್ತಿಯನ್ನು ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯಾವಳಿಗಾಗಿ ಕರೆತರಲು ಮಂಜುನಾಥ್ ಅವರಿಗೆ ಸೂಚಿಸಲಾಗುತ್ತದೆ. ಅದಾಗಲೇ ಮೇಘಾ, ಲತಾ ಮತ್ತು ನಮ್ರತಾ ದಾವಣಗೆರೆಯ ಅಥ್ಲೆಟಿಕ್ಸ್‌ಗೆ ಹೋಗಿರುತ್ತಾರೆ. ‘ರಾಷ್ಟ್ರಮಟ್ಟದಲ್ಲಿ ಆಡುವುದು ಅಪರೂಪದ ಅವಕಾಶ. ಸಾಧ್ಯವಾದರೆ ನಾಳೆಯೇ ಕರೆ ತನ್ನಿ’ ಎಂದಿರುತ್ತಾರೆ ಅವರು. ಆಗ ಮಂಜುನಾಥ್ ರಾತ್ರೋರಾತ್ರಿ ಹೊರಟು, ದಾವಣಗೆರೆ ತಲುಪಿ ಮೇಘಾ ಅವರನ್ನು ಕರೆತಂದು ಬೆಂಗಳೂರಿಗೆ ಬಿಡುತ್ತಾರೆ. ಮೇಘಾ ಆ ವರ್ಷ ಕರ್ನಾಟಕ ತಂಡಕ್ಕಾಗಿ ಆಡುತ್ತಾರೆ. ತಂಡ ‘ರನ್ನರ್ ಅಪ್’ ಆಗುತ್ತದೆ. ಮೇಘಾ ‘ಅತ್ಯುತ್ತಮ ಆಟಗಾರ್ತಿ’ ಪ್ರಶಸ್ತಿ ಪಡೆಯುತ್ತಾರೆ. 2016 ರಲ್ಲಿ ಮೇಘಾ ಮತ್ತು ವೀಣಾ ದಕ್ಷಿಣ ಏಷಿಯನ್ ರಾಷ್ಟ್ರಗಳ ಕ್ರೀಡಾಕೂಟದಲ್ಲಿ ಆಡಿ, ಚಿನ್ನದ ಪದಕ ತಂದುಕೊಡುತ್ತಾರೆ. ಇದು ಕುರುಬೂರು ತಂಡಕ್ಕೆ ತಾವು ರಾಷ್ಟ್ರಮಟ್ಟದಲ್ಲೂ ಆಡಬಹುದೆಂಬ ಅಪಾರ ವಿಶ್ವಾಸವನ್ನು ಹುಟ್ಟಿಸುತ್ತದೆ. ತುಂಬಾ ಮಕ್ಕಳು ಕೊಕ್ಕೊದಲ್ಲಿ ಆಸಕ್ತಿ ತೋರುತ್ತಾರೆ. ಹೀಗಾಗಿ ಸೀನಿಯರ್ ಮತ್ತು ಜೂನಿಯರ್ ಎರಡು ತಂಡಗಳು ತಯಾರಾಗುತ್ತವೆ.
2018ರಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಪಂದ್ಯಾವಳಿಯಲ್ಲಿ ಜೂನಿಯರ್ ಮತ್ತು ಸೀನಿಯರ್ ಎರಡೂ ವಿಭಾಗಗಳಲ್ಲಿಯೂ ಕುರುಬೂರಿನ ಹೆಣ್ಣುಮಕ್ಕಳು ಜಯಭೇರಿ ಬಾರಿಸುತ್ತಾರೆ. ನಗರ ಪ್ರದೇಶಗಳ ಪ್ರತಿಷ್ಠಿತ ಶಾಲೆಗಳ ಮಕ್ಕಳ ಮುಂದೆ ಅಂಗಳವೇ ಇರದೇ ತೆಂಗಿನತೋಟದಲ್ಲಿ ಅಭ್ಯಾಸ ಮಾಡಿದ, ಯಾವ ಸೌಲಭ್ಯವೂ ಇರದ, ಕಪ್ಪುನೆಲದ ಹಳ್ಳಿಯ ಸಾಮಾನ್ಯ ಬಡ ರೈತರ ಮಕ್ಕಳ ಗೆಲುವು ಅಸಾಮಾನ್ಯವೇ ಸರಿ.
ಆವರಿಸಿತು ಕಾರ್ಮೋಡ
ಗೆಲುವಿನ ಯಾತ್ರೆಯಲ್ಲಿ ಯಾವಾಗಲೂ ಸಂಭ್ರಮವೇ ಇರುವುದಿಲ್ಲ. 2018, ಕುರುಬೂರು ತಂಡಕ್ಕೆ ನೋವಿನ ವರ್ಷ. ‘ನಿಮ್ಮ ಶಾಲೆ, ನಿಮ್ಮ ಕೋಚ್‌ಗಿಂತ ಹೆಚ್ಚಿನ ಶಕ್ತಿ ಮತ್ತು ಅವಕಾಶವನ್ನು ಕೊಡುತ್ತೇವೆ. ಅಲ್ಲದೇ ನಿಮ್ಮಲ್ಲೊಂದು ಕ್ಲಬ್ ಸಹ ಇಲ್ಲ’ ಎಂದು ಕೆಲವರು ಆಟಗಾರ್ತಿಯರ ಮನಸು ಕೆಡಿಸುತ್ತಾರೆ. ಏಕಾಏಕಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹದಿನೈದು ಆಟಗಾರ್ತಿಯರು ತಂಡ ಬಿಡುತ್ತಾರೆ. ಸೀನಿಯರ್ ತಂಡದಲ್ಲಿ ಉಳಿದವರು ವೀಣಾ, ಮಂಜುಳಾ ಮತ್ತು ಅಮೂಲ್ಯಾ ಮಾತ್ರ. ‘ನಾವಿರುತ್ತೇವೆ. ಜೂನಿಯರ್ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ’ ಎನ್ನುತ್ತಾರೆ ಅವರು. ಒಂದು ವರ್ಷ ಯಾವ ಪಂದ್ಯಾವಳಿಯಲ್ಲಿಯೂ ಭಾಗವಹಿಸದೆ ಸತತವಾಗಿ ಕಠಿಣ ಅಭ್ಯಾಸ ಮಾಡುತ್ತಾರೆ. ಮತ್ತೆ ಆರಂಭವಾಗುತ್ತದೆ ಜೈತ್ರಯಾತ್ರೆ. 2020ರಲ್ಲಿ ಕುರುಬೂರು ತಂಡ ರಾಜ್ಯ ಮಟ್ಟದ ಪ್ರಶಸ್ತಿ ಗೆಲ್ಲುತ್ತದೆ.
2023ರಲ್ಲಿ ತಂಡದ ಮೋನಿಕಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಾರೆ. ಆ ವರ್ಷ ಭಾರತದ ಕೊಕ್ಕೊ ತಂಡ ಏಷಿಯನ್ ಚಾಂಪಿಯನ್‌ಶಿಪ್ ಗೆಲ್ಲುತ್ತದೆ. ಮೋನಿಕಾಗೆ ಚಿನ್ನದ ಪದಕ ದಕ್ಕುತ್ತದೆ. ಆಗ ಜೂನಿಯರ್ ತಂಡದಲ್ಲಿದ್ದ ಚೈತ್ರಾ ಈಗ 2025ರ ವಿಶ್ವಕಪ್‌ನಲ್ಲಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಆಗುತ್ತಾರೆ. ಅಂದು ಮಂಜುನಾಥ್ ಜೊತೆಗೆ ನಿಂತು ತಂಡವನ್ನು ತಯಾರು ಮಾಡಿದ್ದ ಅಮೂಲ್ಯಾ ಅದೇ ವಿಶ್ವಕಪ್ ಮ್ಯಾಚ್‌ನ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದು ಎಂಥ ಅದ್ಭುತ ಸ್ಫೂರ್ತಿಯ ಕಥನ!
ಪ್ರಗತಿಪರ ಕೃಷಿಕ ಕೈಲಾಸಮೂರ್ತಿ, ‘ಊರಲ್ಲಿ ಸರಿಯಾದ ಕೋರ್ಟ್ ಇಲ್ಲ. ದಾನಿಗಳು ಕೊಟ್ಟ ಹಣದಲ್ಲಿ ಬಟ್ಟೆ, ಶೂಗಳನ್ನು ಕೊಂಡುಕೊಳ್ಳುತ್ತಾರೆ. ಹಳ್ಳಿಗಾಡಿನ ಇಂಥ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಸೂಕ್ತ ಮೂಲಸೌಲಭ್ಯಗಳನ್ನು ಕೊಡಬೇಕು’ ಎನ್ನುತ್ತಾರೆ.
ಮಂಜುನಾಥ ಮೇಷ್ಟ್ರಿಗೆ ಬೇರೆಡೆ ಅವಕಾಶವಿದ್ದರೂ ಶಾಲೆ ಬಿಟ್ಟು ಹೋಗಿಲ್ಲ. ‘ನನ್ನದೇನಿದೆ? ಆ ಮಕ್ಕಳು ಕಷ್ಟಪಡ್ತಿದ್ದಾರೆ’ ಅನ್ನುತ್ತಾರೆ. ಒಬ್ಬ ಶಿಕ್ಷಕ ಮನಸು ಮಾಡಿದರೆ ಮಕ್ಕಳನ್ನು ಯಾವ ಎತ್ತರಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ಮಂಜುನಾಥ್ ಅವರೇ ಸಾಕ್ಷಿ. ಮಕ್ಕಳು ಆಟದ ಜೊತೆ ಪಠ್ಯದಲ್ಲೂ ಹಿಂದೆ ಬೀಳದಂತೆ ಅವರು ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲ ಹೆಣ್ಣುಮಕ್ಕಳು ಕೊಕ್ಕೊ ಕಾರಣಕ್ಕೆ ಕ್ರೀಡಾ ಕೋಟಾದಡಿ ಸರ್ಕಾರಿ ನೌಕರಿ ಪಡೆದುಕೊಂಡಿದ್ದಾರೆ. ಒಂದು ವೇಳೆ ಮಂಜುನಾಥ್ ಈ ಶಾಲೆಯ ಶಿಕ್ಷಕರಾಗದೇ ಹೋಗಿದ್ದರೆ ಕುರುಬೂರಿನಲ್ಲಿ ಇಷ್ಟೊಂದು ಚಾಂಪಿಯನ್‌ಗಳು ಹುಟ್ಟುತ್ತಿರಲಿಲ್ಲ. ಅವರ ಪ್ರತಿಭೆ ಬೆಳಕಿಗೆ ಬರುತ್ತಿರಲಿಲ್ಲ. ಅನೇಕ ಮಿತಿಗಳೊಂದಿಗೆ ಇಷ್ಟೆಲ್ಲವನ್ನೂ ಸಾಧಿಸುವುದು ಅವರಿಗೆ ಸಾಧ್ಯವಾಗುವುದಾದರೆ ಅದು ಇನ್ನೂ ಅನೇಕ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಬೇಕಲ್ಲವೇ?
‘ಕುರುಬೂರು ನೆಲದ ಮಣ್ಣಿಗೆ ಒಂದು ಶಕ್ತಿ ಇದೆ’ ಅನ್ನುತ್ತಾರೆ ಮಂಜುನಾಥ್. ಅದು ನಿಜ ಎನ್ನುವುದು ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಕುರುಬೂರಿನಲ್ಲಿ ಕೊಕ್ಕೊ ಅಕಾಡೆಮಿ ಸ್ಥಾಪನೆ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಇಲ್ಲಿನ ಮಕ್ಕಳ ಸಾಧನೆಯನ್ನು ಗುರುತಿಸಬೇಕು. ಒಂದು ವೇಳೆ ಗುರುತಿಸದಿದ್ದರೂ ಆ ಮಣ್ಣಿನ ಹೆಣ್ಣುಮಕ್ಕಳು ಆಟ ನಿಲ್ಲಿಸುವುದಿಲ್ಲ ಅನ್ನುವುದು ಬೇರೆ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.